ADVERTISEMENT

ಆತುರದಿಂದ ದೇವಸ್ಥಾನ ಒಡೆಯದಂತೆ ಜಿಲ್ಲಾಧಿಕಾರಿಗಳಿಗೆ ಸಿ.ಎಂ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 1:45 IST
Last Updated 15 ಸೆಪ್ಟೆಂಬರ್ 2021, 1:45 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಸ್ತೆ ಬದಿ ಇರುವ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಮುಂದಿಟ್ಟುಕೊಂಡು ಆತುರದಲ್ಲಿ ಯಾವುದೇ ದೇವಸ್ಥಾನ ಒಡೆಯದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೈಸೂರು ಜಿಲ್ಲೆಯಲ್ಲಿ ದೇವಾಲಯ
ಗಳ ತೆರವಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಸದನದಲ್ಲೇ ನೀಡುತ್ತೇನೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದು
ಕೊಳ್ಳದೆ ಕಾರ್ಯಾಚರಣೆ ನಡೆಸಿರುವ ಕುರಿತು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ಗೆ ನೋಟಿಸ್‌ ನೀಡಲಾಗಿದೆ’ ಎಂದರು.

ದೇವಸ್ಥಾನಗಳನ್ನು ಒಡೆಯುವ ವಿಚಾರದಲ್ಲಿ ರಾಜ್ಯದಲ್ಲಿ ಅವಸರದ ತೀರ್ಮಾನ ಮಾಡಬಾರದು. ಸುಪ್ರೀಂ ಕೋರ್ಟ್‌ ಆದೇಶದ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿ ಎರಡು ದಿನಗಳಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೂ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಿದರು.

ADVERTISEMENT

ದಿಢೀರ್‌ ಕಾರ್ಯಾಚರಣೆಗೆ ತಡೆ: ಇದೇ ವಿಷಯ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘ದಿಢೀರ್‌ ಆಗಿ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್‌ ಹೇಳಿಲ್ಲ. ಅಂತಹ ಕಟ್ಟಡಗಳ ಸ್ಥಳಾಂತರಕ್ಕೆ ಅವಕಾಶವಿದೆ. ಅನಿವಾರ್ಯ ಆದಲ್ಲಿ ಸಾರ್ವಜನಿಕರನ್ನು ಮನವೊಲಿಸಿ ತೆರವು ಕಾರ್ಯಾಚರಣೆ ಮಾಡುವಂತೆ ನ್ಯಾಯಾಲಯ ಹೇಳಿದೆ. ಈ ನಿರ್ದೇಶನಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಧಾರ್ಮಿಕ ಕಟ್ಟಡಗಳನ್ನು ದಿಢೀರ್‌ ನೆಲಸಮಗೊಳಿಸುವುದು ಸರಿಯಲ್ಲ ಎಂಬುದು ಸರ್ಕಾರದ ಭಾವನೆ. ಸುಪ್ರೀಂಕೋರ್ಟ್‌ ಆದೇಶ ದೇವಸ್ಥಾನಗಳಿಗೆ ಮಾತ್ರವಲ್ಲ, ಮಸೀದಿ, ಚರ್ಚ್‌ಸೇರಿದಂತೆ ಎಲ್ಲ ಧಾರ್ಮಿಕ ಕಟ್ಟಡಗಳಿಗೂ ಅನ್ವಯಿಸುತ್ತದೆ. ಈ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸದನದಲ್ಲಿ ಪ್ರಕಟಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.