ADVERTISEMENT

ರೆಮ್‌ಡಿಸಿವಿರ್: ದುಪ್ಪಟ್ಟು ದರಕ್ಕೆ ಮಾರಾಟ, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಆರೋಪ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:36 IST
Last Updated 15 ಏಪ್ರಿಲ್ 2021, 19:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್ ಪೀಡಿತರ ಚಿಕಿತ್ಸೆಗೆ ಬಳಸುವ ‘ರೆಮ್‌ಡಿಸಿವಿರ್’ ಚುಚ್ಚುಮದ್ದಿನ ಅಭಾವ ಸೃಷ್ಟಿಯಾದ ಕಾರಣ ಮಧ್ಯವರ್ತಿಗಳು ಪ್ರತಿ ಇಂಜೆಕ್ಷನ್‌ಗೆ ₹ 15 ಸಾವಿರದಿಂದ ₹ 20 ಸಾವಿರಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ನಗರದ ಖಾಸಗಿ ಆಸ್ಪತ್ರೆಗಳು ಆರೋಪಿಸಿವೆ.

ಗಂಭೀರವಾಗಿ ಅಸ್ವಸ್ಥರಾದ ಕೋವಿಡ್ ಪೀಡಿತರಿಗೆ ಚೇತರಿಸಿಕೊಳ್ಳಲು ರೆಮ್‌ಡಿಸಿವಿರ್ ಚುಚ್ಚುಮದ್ದು ಸಹಕಾರಿಯಾಗಿದೆ. ಕಳೆದ ವರ್ಷಾಂತ್ಯಕ್ಕೆ ಕೋವಿಡ್ ಪ್ರಕರಣಗಳು ಇಳಿಕೆ ಕಂಡ ಕಾರಣ ಈ ಔಷಧದ ಉತ್ಪಾದನೆಯನ್ನು ಕಂಪನಿಗಳು ಕಡಿಮೆ ಮಾಡಿದ್ದವು. ಈಗ ಮತ್ತೆ ಕೋವಿಡ್ ಪ್ರಕರಣಗಳು ಏರುಗತಿ ಪಡೆದ ಕಾರಣ ಔಷಧಕ್ಕೆ ಬೇಡಿಕೆ ಹೆಚ್ಚಿದೆ.

‘ಒಂದು ಬಾಟಲಿಯಲ್ಲಿ 100 ಎಂ.ಜಿ ಔಷಧ ಇರಲಿದ್ದು, ಇದರ ಗರಿಷ್ಠ ಮಾರಾಟ ದರ ₹ 4 ಸಾವಿರ ನಿಗದಿ ಮಾಡಲಾಗಿದೆ. ಒಂದು ರೋಗಿಗೆ ಆರು ಬಾಟಲಿ (ಇಂಜೆಕ್ಷನ್) ಬೇಕಾಗುತ್ತದೆ. ಇದನ್ನು ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಇದು ದಾಸ್ತಾನು ಇಲ್ಲದ ಪರಿಣಾಮ ಸಮಸ್ಯೆಯಾಗಿದೆ. ಇದನ್ನು ಔಷಧ ನಿಯಂತ್ರಕರ ಗಮನಕ್ಕೆ ತಂದರೆ ಕೂಡ ಕ್ರಮ ಜಾರಿಯಾಗಿಲ್ಲ. ಮುಂದಿನ ನಾಲ್ಕು ದಿನಗಳಿಗೆ 50 ಸಾವಿರ ಬಾಟಲಿಗಳು ಅಗತ್ಯವಿದೆ’ ಎಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ADVERTISEMENT

ಶೇ 20ರಷ್ಟು ಪೂರೈಕೆ: ‘ಕೋವಿಡ್‌ ಪ್ರಕರಣಗಳು ಏರಿಕೆ ಕಂಡ ಕಾರಣ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ‘ರೆಮ್‌ಡಿಸಿವಿರ್’ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ಒಟ್ಟು ಬೇಡಿಕೆಯಲ್ಲಿ ಶೇ 20ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಮನೆಯಲ್ಲಿರುವ ರೋಗಿಗಳು ಸಹ ಔಷಧದೊಂದಿಗೆ ಬಂದು, ಚುಚ್ಚುಮದ್ದು ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಕಾಳಸಂತೆಯಲ್ಲಿ ಔಷಧ ಮಾರಾಟವಾಗುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು ಮಾಡುವ ರೋಗಿಗಳಿಗೆ ಬೇಕಾದ ಔಷಧವನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

‘ಪ್ರತಿ ನಿತ್ಯ ದಾಖಲಾಗುತ್ತಿರುವ ಕೋವಿಡ್‌ ಪೀಡಿತರಲ್ಲಿ ಸುಮಾರು 20ರಿಂದ 30 ರೋಗಿಗಳಿಗೆ ರೆಮ್‌ಡಿಸಿವಿರ್ ಚುಚ್ಚುಮದ್ದುವಿನ ಅವಶ್ಯಕತೆ ಕಂಡುಬರುತ್ತಿದೆ. ಸಾಮಾನ್ಯವಾಗಿ ಉಸಿರಾಟದ ತೊಂದರೆ ಕಂಡುಬಂದ ಸಮಯದಲ್ಲಿ ಈ ಚುಚ್ಚು ಮದ್ದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಈಗ ಅಭಾವ ಸೃಷ್ಟಿಯಾದ ಕಾರಣ ಅಗತ್ಯವಿರುವ ಎಲ್ಲ ರೋಗಿಗಳಿಗೆ ಈ ಚುಚ್ಚುಮದ್ದು ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ರೀಗಲ್‌ ಆಸ್ಪತ್ರೆಯ ಡಾ.ಸೂರಿರಾಜು ತಿಳಿಸಿದರು.

‘ರೆಮ್‌ಡಿಸಿವಿರ್ ಚುಚ್ಚುಮದ್ದು ಹಾಗೂ ಆಮ್ಲಜನಕದ ಅಭಾವ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕಾಳಸಂತೆಯಲ್ಲಿ ಅಗತ್ಯ ಔಷಧದ ಮಾರಾಟವನ್ನು ಸರ್ಕಾರ ತಡೆಯಬೇಕು. ಇಲ್ಲವಾದಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಲಿದೆ. ಜನತೆ ಕೂಡ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಎಸಿಇ ಸುಹಾಸ್‌ ಆಸ್ಪತ್ರೆಯ ಜಗದೀಶ್‌ ಹಿರೇಮಠ ಹೇಳಿದರು.

‘ಕೊರತೆಯಾಗದಂತೆ ಕ್ರಮ’

‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ‘ರೆಮ್‌ಡಿಸಿವಿರ್’ ಔಷಧವನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಖಾಸಗಿ ಆಸ್ಪತ್ರೆಗಳು ಸೋಂಕಿತರ ಎಸ್‌ಆರ್‌ಎಫ್ ಐಡಿ ಮತ್ತಿತರ ವಿವರಗಳನ್ನು ಇಮೇಲ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಒದಗಿಸಿ, ಇಂಜೆಕ್ಷನ್ ಪಡೆಯಬಹುದಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಈ ಇಂಜೆಕ್ಷನ್ ಕೊರತೆಯಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಅಗತ್ಯವಿದ್ದರೆ ತಕ್ಷಣ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ಔಷಧ ದುರ್ಬಳಕೆ ಮಾಡಿದರೆ ಕ್ರಮ’

‘ರೆಮ್‌ಡಿಸಿವಿರ್ ಔಷಧದ ಕೃತಕ ಅಭಾವ ಸೃಷ್ಟಿಸಿ, ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಚುಚ್ಚುಮದ್ದಿನ ಕೃತಕ ಅಭಾವ ಸೃಷ್ಟಿಸಿ, ದುಬಾರಿ ದರಕ್ಕೆ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.