ADVERTISEMENT

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 18:12 IST
Last Updated 11 ಆಗಸ್ಟ್ 2022, 18:12 IST
ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ
ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ    

ಕರ್ನಾಟಕ ಸುಗಮ ಸಂಗೀತದ ಪ್ರಸಿದ್ದ ಗಾಯಕರಾಗಿದ್ದ, ತಮ್ಮ ಮೋಹಕ ಕಂಠದಿಂದ ನಾಡಿನ ಜನರ ಮನಸೂರೆಗೊಂಡಿದ್ದ ಶಿವಮೊಗ್ಗ ಸುಬ್ಬಣ್ಣ (83) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಅವರನ್ನು ಅಗಲಿದ್ದಾರೆ.

ಸುಬ್ಬಣ್ಣ ಅವರು ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಊರಿನಲ್ಲಿ 1938ರ ಡಿಸೆಂಬರ್ 14ರಂದು ಜನಿಸಿದರು. ತಂದೆ ಗಣೇಶರಾಯರು, ತಾಯಿ ರಂಗನಾಯಕಿ. ತಾತ ಶಾಮಣ್ಣ, ನಂತರ ಎಂ. ಪ್ರಭಾಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ಕವಿಗೀತೆಗಳನ್ನು ಹಾಡುವುದರಲ್ಲಿ ಆಕರ್ಷಿತರಾದ ಸುಬ್ಬಣ್ಣ ಅವರು, ಕುವೆಂಪು, ಬೇಂದ್ರೆ ಹಾಗೂ ನಾಡಿನ ಇನ್ನಿತರ ಶ್ರೇಷ್ಠ ಕವಿಗಳ ಕವಿತೆಗಳನ್ನು ರಾಗ ಸಂಯೋಜಿಸಿ ಹಾಡುವುದರ ಮೂಲಕ ಮನೆ ಮಾತಾದರು.

ADVERTISEMENT

ಬಿ.ಎ, ಬಿ.ಕಾಂ ಮತ್ತು ಎಲ್‌ಎಲ್‌ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ ಅವರು 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದರು. 1979ರಲ್ಲಿ ‘ಕಾಡುಕುದುರೆ’ ಚಲನಚಿತ್ರದಲ್ಲಿ ಅವರು ಹಾಡಿದ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಜತ ಕಮಲ ರಾಷ್ಟ್ರಪ್ರಶಸ್ತಿ ಪಡೆದು, ಆ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗ ಎನಿಸಿಕೊಂಡರು.

ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಟಾಪ್ ಶ್ರೇಣಿಯ ಗಾಯಕರಾಗಿದ್ದರು. 1985ರಲ್ಲಿ ರಾಜ್ಯೋತ್ಸವ ಪುರಸ್ಕಾರ, 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ, 2008ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, 2003ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ‘ವರ್ಷದ ಕಲಾವಿದ’ ಅಲ್ಲದೇ ಇನ್ನೂ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ದೊರೆತಿವೆ.‌

ರಾಷ್ಟ್ರವಲ್ಲದೇ ಅಮೆರಿಕ, ಸಿಂಗಾಪುರ ಮೊದಲಾದ ಕಡೆ ಸುಗಮ ಸಂಗೀತದ ಕಂಪು ಹರಡಿದ್ದಾರೆ. ಅವರ ನೂರಾರು ಧ್ವನಿಸುರಳಿಗಳು ನಾಡಿನ ಮೂಲೆಮೂಲೆಗೂ ತಲುಪಿವೆ. ಎರಡು ಬಾರಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿರುವ ಸುಬ್ಬಣ್ಣ ಅವರು, ಆಕಾಶವಾಣಿ ನಡೆಸುವ ವಾರ್ಷಿಕ ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.