ADVERTISEMENT

ಯತ್ನಾಳಗೆ ಬಾಯಿ ಚಪಲ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 18:52 IST
Last Updated 5 ನವೆಂಬರ್ 2020, 18:52 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ಬೆಂಗಳೂರು: ‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಹೇಳಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪಕ್ಷದ ಅಧ್ಯಕ್ಷರು ಏನು ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಯಿ ಚಪಲಕ್ಕೆ ಯತ್ನಾಳ ಮಾತನಾಡುತ್ತಿದ್ದಾರೆ. ಅಧಿಕಾರ ಸಿಕ್ಕಿಲ್ಲ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ. ಶಾಸಕಾಂಗ ಸಭೆಯಲ್ಲಿ ಮಾತನಾಡಬೇಕು. ನಾನು ನನ್ನ ಭಾವನೆಗಳನ್ನು ಶಾಸಕಾಂಗ ಸಭೆಯಲ್ಲಿ ಹೇಳಿದ್ದೇನೆ’ ಎಂದರು.

‘ಬಿ.ವೈ. ವಿಜಯೇಂದ್ರ ಬಿಜೆಪಿ ಪಕ್ಷದ ನಾಯಕರಾಗಿ ಕೆ.ಆರ್. ಪೇಟೆ ಮಾದರಿಯಲ್ಲಿ ಶಿರಾ ಚುನಾವಣೆ ನಡೆಸಿದ್ದಾರೆ. ಜಮೀರ್ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜಯ ಗಳಿಸಿ ಬರಲಿ’ ಎಂದು ಸವಾಲು ಹಾಕಿದರು.

ADVERTISEMENT

ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ಸ್ಪರ್ಧೆ ಮಾಡುವ ಬಗ್ಗೆ ವಿಜಯೇಂದ್ರ ಎಲ್ಲೂ ಹೇಳಿಲ್ಲ. ಯುವ ನಾಯಕರಾಗಿ ವಿಜಯೇಂದ್ರ ಬೆಳೆಯುತ್ತಿದ್ದಾರೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.