ADVERTISEMENT

Renukaswamy Murder Case: ನಟ ದರ್ಶನ್‌ಗೆ ಹೆಚ್ಚುವರಿ ಕಂಬಳಿ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 14:34 IST
Last Updated 19 ನವೆಂಬರ್ 2025, 14:34 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರಿಗೆ ಹೆಚ್ಚುವರಿ ಕಂಬಳಿ ನೀಡಲು 57ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಸೂಚಿಸಿತು.

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಆರು ಮಂದಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರು. ಇತರೆ ಆರೋಪಿಗಳು ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.

ಆರೋಪಿಗಳ ಹಾಜರಾತಿ ಪಡೆದ ನ್ಯಾಯಾಧೀಶರು, ವಿಚಾರಣೆ ನಡೆಸಿದರು. ಇದೇ ವೇಳೆ ದರ್ಶನ್‌ ಅವರು ನ್ಯಾಯಾಧೀಶರ ಬಳಿ ಮನವಿ ಸಲ್ಲಿಸಿದರು.

ADVERTISEMENT

‘ಕಳೆದ ಕೆಲವು ದಿನಗಳಿಂದ ತುಂಬ ಚಳಿಯಿದೆ. ಹೆಚ್ಚುವರಿ ಕಂಬಳಿ ಕೇಳಿದರೂ ಜೈಲಿನ ಸಿಬ್ಬಂದಿ ನೀಡುತ್ತಿಲ್ಲ. ಯಾರಿಗೂ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಯವರು ತಂದುಕೊಟ್ಟಿರುವ ಬೆಡ್‌ಶೀಟ್‌ ಸಹ ಬಳಸಲು ಬಿಡುತ್ತಿಲ್ಲ. ಈಗಲಾದರೂ ಹೆಚ್ಚುವರಿ ಕಂಬಳಿ ನೀಡುವಂತೆ ಕಾರಾಗೃಹದ ಸಿಬ್ಬಂದಿಗೆ ಸೂಚಿಸಿ’ ಎಂದು ನ್ಯಾಯಾಧೀಶರಲ್ಲಿ ದರ್ಶನ್‌ ಮನವಿ ಮಾಡಿದರು. ದರ್ಶನ್‌ ಅವರ ವ್ಯವಸ್ಥಾಪಕ ನಾಗರಾಜ್ ಸಹ ಹೆಚ್ಚುವರಿ ಕಂಬಳಿಗಾಗಿ ಬೇಡಿಕೆ ಇಟ್ಟರು. 

ಆಗ ನ್ಯಾಯಾಧೀಶ ಈರಪ್ಪಣ್ಣ ಪವಡಿ ನಾಯ್ಕ್ ಅವರು ಹೆಚ್ಚುವರಿ ಕಂಬಳಿ ನೀಡುವಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದರು.

ವಿಚಾರಣಾಧೀನ ಕೈದಿಗಳಿಗೆ ಈ ಹಿಂದೆಯೇ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಲಾಗಿತ್ತು. ಪದೇ ಪದೇ ಸೂಚನೆ ನೀಡಿದ್ದರೂ ಯಾವ ಕಾರಣಕ್ಕೆ ನೀಡಿಲ್ಲ. ಆರೋಪಿಗಳು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು.

ಈ ಹಿಂದೆ ದರ್ಶನ್‌ ಅವರು ಹೆಚ್ಚುವರಿ ಹಾಸಿಗೆ, ದಿಂಬು ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ವಾಕಿಂಗ್‌ ಅವಕಾಶ ನೀಡುವಂತೆಯೇ ಕೋರಿದ್ದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಪವಿತ್ರಾಗೌಡ ಅವರಿಗೆ ‘ನೀವು ಏನಾದರೂ ಹೇಳುವುದು ಇದೆಯೇ’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ ಪವಿತ್ರಾಗೌಡ ಅವರು ಪ್ರತಿಕ್ರಿಯೆ ನೀಡಲಿಲ್ಲ.

ಸಿಆರ್‌ಪಿಸಿ ಸೆಕ್ಷನ್ 294 ಅಡಿ ದಾಖಲೆಗಳನ್ನು ಸಾಕ್ಷ್ಯವಾಗಿ ಮಾರ್ಕಿಂಗ್ ಮಾಡಲು ಅನುಮತಿ ಕೇಳಿ ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿಗೆ ಆಕ್ಷೇಪಿಸಿ ಆರೋಪಿಗಳ ಪರ ವಕೀಲರು ಲಿಖಿತ ಮೆಮೊ ಸಲ್ಲಿಸುವುದಾಗಿ ತಿಳಿಸಿದರು. ಬಳಿಕ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.