ದರ್ಶನ್, ಪವಿತ್ರಾ ಗೌಡ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಸೇರಿದಂತೆ ಒಟ್ಟು ಏಳು ಜನರಿಗೆ ಹೈಕೋರ್ಟ್ ಷರತ್ತುಬದ್ಧ ನಿಯಮಿತ (ರೆಗ್ಯುಲರ್) ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.
ಪ್ರಕರಣದ ಇತರ ಆರೋಪಿಗಳಾದ; ಬೆಂಗಳೂರಿನ ಪವಿತ್ರಾ ಗೌಡ (33), ಎಂ.ಲಕ್ಷ್ಮಣ್ (55), ಪ್ರದೋಷ್ ರಾವ್ ಅಲಿಯಾಸ್ ಪ್ರದೋಷ್ (40), ಮೈಸೂರಿನ ಆರ್.ನಾಗರಾಜು (41), ಹೊಳಲ್ಕೆರೆಯ ಅನುಕುಮಾರ್ ಅಲಿಯಾಸ್ ಅನು (30) ಮತ್ತು ಚಿತ್ರದುರ್ಗದ ಜಗದೀಶ್ ಅಲಿಯಾಸ್ ಜಗ್ಗ (36) ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಪೀಠ ಪುರಸ್ಕರಿಸಿ ಆದೇಶಿಸಿದೆ.
‘ಎಲ್ಲ ಆರೋಪಿಗಳು ತಲಾ ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು’ ಎಂಬುದೂ ಸೇರಿದಂತೆ ಐದು ಸಾಂಪ್ರದಾಯಿಕ ಷರತ್ತುಗಳನ್ನು ವಿಧಿಸಿದೆ.
‘ಆರೋಪಿಗಳನ್ನು ಬಂಧಿಸಿದ ನಂತರ ಪ್ರಾಸಿಕ್ಯೂಷನ್ ತಕ್ಷಣವೇ ಇವರನ್ನು; ಏಕೆ ಬಂಧಿಸಿದ್ದೇವೆ ಎಂಬುದಕ್ಕೆ ಸಕಾರಣಗಳನ್ನು ನೀಡಿಲ್ಲ. ಹೀಗಾಗಿ, ಕಾನೂನಿನ ಈ ಲೋಪದ ಆಧಾರದಡಿ ಎಲ್ಲರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ’ ಎಂದು ನ್ಯಾಯಪೀಠ ತನ್ನ 68 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಮೃತದೇಹ ಸುಮನಹಳ್ಳಿಯ ಸತ್ವ ಅಪಾರ್ಟ್‌ಮೆಂಟ್ ಎದುರುಗಡೆಯ ಮೋರಿ ಪಕ್ಕದಲ್ಲಿ 2024ರ ಜೂನ್ 9ರಂದು ಪತ್ತೆಯಾಗಿತ್ತು. ಈ ಸಂಬಂಧ ನಗರದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ವಿವಿಧ ಕಲಂಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ದರ್ಶನ್ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್–ಎಸ್.ಸುನಿಲ್ ಕುಮಾರ್, ಪವಿತ್ರಾ ಗೌಡ ಪರ ಪದಾಂಕಿತ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್–ಮೆಲಾನಿಯಾ ಸೆಬಾಸ್ಟಿಯನ್, ಆರ್.ನಾಗರಾಜು ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ–ಜಿ.ಲಕ್ಷ್ಮಿಕಾಂತ್, ಎಂ.ಲಕ್ಷ್ಮಣ್ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಂ–ಸುಯೋಗ್ ಹೇರಳೆ, ಅನುಕುಮಾರ್ ಮತ್ತು ಜಗದೀಶ್ ಪರ ಹೈಕೋರ್ಟ್ ವಕೀಲ ಆರ್.ರಂಗನಾಥ ರೆಡ್ಡಿ, ಪ್ರಾಸಿಕ್ಯೂಷನ್ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.