ADVERTISEMENT

2019ರಲ್ಲಿ 1996ರ ಆ ದಿನಗಳು ಮರುಕಳಿಸಲಿವೆ; ಎಚ್‌.ಡಿ.ಕುಮಾರಸ್ವಾಮಿ

ಏಜೆನ್ಸೀಸ್
Published 8 ನವೆಂಬರ್ 2018, 13:51 IST
Last Updated 8 ನವೆಂಬರ್ 2018, 13:51 IST
   

ಬೆಂಗಳೂರು: ’ಮುಂಬರುವ ಲೋಕಸಭಾ ಚುನಾವಣೆಯಲ್ಲಿವಿರೋಧ ಪಕ್ಷಗಳೆಲ್ಲ ಒಗ್ಗೂಡಿದರೆ ಮಾತ್ರವೇ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯಿಂದ ಉಳಿಸಲು ಸಾಧ್ಯ’–ಜನತಾ ದಳ(ಎಸ್‌) ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರನ್ನು ಗುರುವಾರ ಭೇಟಿಯಾದ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಉದ್ಘರಿಸಿದ ಮಾತುಗಳಿವು.

ಪದ್ಮನಾಭನಗರದ ನಿವಾಸದಲ್ಲಿ ಎಚ್‌.ಡಿ.ದೇವೇಗೌಡ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬರಮಾಡಿಕೊಂಡರು. ಮಧ್ಯಾಹ್ನ 3:30ರ ಸುಮಾರಿಗೆ ಪ್ರಾರಂಭವಾದ ಮಾತುಕತೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಭಾಗಿಯಾದರು. ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡುವ ತುರ್ತು ಇರುವ ಬಗೆಗೆ ಮೂವರೂ ನಾಯಕರು ಅಭಿಪ್ರಾಯ ಪಟ್ಟರು. ಪ್ರಧಾನಿ ಅಭ್ಯರ್ಥಿ ಆಯ್ಕೆ ಕುರಿತು ಮುಂದಿನ ಹಂತದಲ್ಲಿ ನಿರ್ಧರಿಸುವ ಕುರಿತು ಚರ್ಚಿಸಲಾಗಿದೆ ಎಂದರು.

ಪೂರ್ಣ ವಿಶ್ವಾಸದೊಂದಿಗೆ ಮಾತನಾಡಿದಸಿಎಂ ಕುಮಾರಸ್ವಾಮಿ, ’2019ರಲ್ಲಿ 1996ರ ಫಲಿತಾಂಶ ಪುನರಾವರ್ತನೆಯಾಗಲಿದೆ’ ಎನ್ನುವ ಮೂಲಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು, ತನ್ನ ತಂದೆ ಪ್ರಧಾನಿಯಾಗಿದ್ದನ್ನು ಪ್ರಸ್ತಾಪಿಸಿದರು.

ADVERTISEMENT

ಆರ್‌ಬಿಐ, ಸಿಬಿಐನಂತಹ ರಾಷ್ಟ್ರೀಯ ಸಂಸ್ಥೆಗಳು ಹೊಂದಾಣಿಗೆ ಒಳಗಾಗುತ್ತಿರುವ ಸಮಯದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಪಕ್ಷಗಳ ಮಹಾಮೈತ್ರಿ ಅಗತ್ಯವಿದೆ. ಸ್ವಾಯತ್ತವಾಗಿರಬೇಕಾದ ತನಿಖಾ ಸಂಸ್ಥೆಯನ್ನು ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದರು.

ಕರ್ನಾಟಕ ಉಪಚುನಾವಣೆ ಫಲಿತಾಂಶವು, ದೇಶದ ಜನತೆಯ ಒಲವು ಯಾವ ದಿಕ್ಕಿನತ್ತ ಇದೆ ಎಂಬುದರ ಸಂಕೇತವಾಗಿದೆ. ಕೇಂದ್ರ ಸರ್ಕಾರ ವಿರೋಧಿ ಜನರ ಭಾವನೆಯನ್ನು ಮುಂದಕ್ಕೆ ಒಯ್ಯುವುದರ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಪಶ್ಚಿಮಬಂಗಾಳ ಮತ್ತು ಕರ್ನಾಟಕದಲ್ಲಿ ಜನವರಿಯಲ್ಲಿ ಬೃಹತ್‌ ರ್‍ಯಾಲಿಗಳನ್ನು ಆಯೋಜಿಸಲಾಗುವುದು ಎಂದುಚಂದ್ರಬಾಬು ನಾಯ್ಡು ಹೇಳಿದರು.

ಬಿಜೆಪಿ ವಿರೋಧಿ ಶಕ್ತಿಯನ್ನು ಬಲಪಡಿಸಲು ಮಾಯಾವತಿ, ಮುಲಾಯಂ, ಅಖಿಲೇಶ್‌, ಮಮತಾ ಅವರನ್ನು ಭೇಟಿ ಮಾಡಿದ್ದೇನೆ. ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.