ADVERTISEMENT

ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 14:17 IST
Last Updated 27 ಜನವರಿ 2021, 14:17 IST
ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್‌ ಪೆರೇಡ್ ವೇಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ‌ ಎಂಬುದು ಪುರಾವೆಸಹಿತ ಸಾಬೀತಾಗಿದೆ. ಇಂತಹ ಬಿಜೆಪಿ, ರೈತರಿಗೆ ಭಯೋತ್ಪಾದಕರ ಬೆಂಬಲ ಇದೆಯೆಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರೈತ ಚಳವಳಿಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇದ್ದರೆ ಅವರನ್ನು ಬಂಧಿಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರೂ ರೈತ ವಿರೋಧಿ‌ ಕಾನೂನುಗಳನ್ನು ವಾಪಸು‌ ಪಡೆಯಲು ನಿರಾಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿದೆ. ಅವರ 56 ಇಂಚಿನ ಎದೆಯೊಳಗೆ ಬಡವರಿಗಾಗಿ ಮಿಡಿಯುವ ಹೃದಯವೇ ಇಲ್ಲ ಎಂದಿದ್ದಾರೆ.

ADVERTISEMENT

ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಬಗೆಹರಿಸುವ ನೈಜ ಕಾಳಜಿ ಇದ್ದಿದ್ದರೆ ಹನ್ನೊಂದು ಸುತ್ತು ಮಾತುಕತೆ ನಡೆಸುವ ಅಗತ್ಯ ಬೀಳುತ್ತಿತ್ತಾ? ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದರೆ ಕಾಯ್ದೆ ವಾಪಾಸು ಪಡೆಯಬೇಕಿತ್ತಲ್ಲವೇ?. ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಂಡವಾಳಶಾಹಿಗಳ ಗುಲಾಮಗಿರಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅವರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಎಂದು ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ, ಹೀಗಾಗಿ ರೈತರು ಎಷ್ಟೇ ಪ್ರತಿಭಟನೆ ನಡೆಸಿದರೂ ಅವುಗಳನ್ನು ವಾಪಾಸು ಪಡೆಯುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.