ADVERTISEMENT

ನಗರದೆಲ್ಲೆಡೆ ರಾರಾಜಿಸಿದ ತ್ರಿವರ್ಣಧ್ವಜ

ಸರ್ಕಾರಿ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ಸಂಘ–ಸಂಸ್ಥೆಗಳಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 20:09 IST
Last Updated 26 ಜನವರಿ 2020, 20:09 IST
   

ಬೆಂಗಳೂರು: ನಗರದಲ್ಲಿ ಭಾನುವಾರ ಸರ್ಕಾರದ ವಿವಿಧ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಶಾಲಾ–ಕಾಲೇಜು ಹಾಗೂ ಖಾಸಗಿ ಸಂಘ–ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಎಲ್ಲೆಡೆ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು.

ಸಂಘ-ಸಂಸ್ಥೆಗಳು ಒಂದೆಡೆ ಧ್ವಜಾರೋಹಣ ಮಾಡಿ, ಸಿಹಿ ಹಂಚಿದರೆ, ಮತ್ತೊಂದೆಡೆ, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಭಾನುವಾರ ರಜೆಯಿದ್ದರೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬಂದು ತಮ್ಮ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ ಗಣರಾಜ್ಯೋತ್ಸವ ಆಚರಿಸಿದರು.ಪೊಲೀಸ್‌ ಠಾಣೆಗಳು, ಅಂಗಡಿ-ಮುಂಗಟ್ಟುಗಳು, ಕಚೇರಿ ಆವರಣಗಳ ಮುಂದೆ ಕೇಸರಿ, ಬಿಳಿ, ಹಸಿರು ಬಣ್ಣದ ರಂಗೋಲಿಗಳ ಚಿತ್ತಾರ ಆಕರ್ಷಕವಾಗಿತ್ತು.

ಕೆಎಸ್‌ಆರ್‌ಟಿಸಿ:ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಧ್ವಜಾರೋಹಣ ನೆರವೇರಿಸಿದರು.

ADVERTISEMENT

2018-19ನೇ ಸಾಲಿನಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಮಕ್ಕಳಿಗೆ ಒಟ್ಟು 1,297 ಮಕ್ಕಳಿಗೆ ₹44.44 ಲಕ್ಷ ನಗದು ಪುರಸ್ಕಾರ ನೀಡಲಾಯಿತು.

ವಿಶ್ವವಿದ್ಯಾಲಯಗಳು:ಜಿಕೆವಿಕೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಧ್ವಜಾರೋಹಣ ನೆರವೇರಿಸಿದರು.ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಧ್ವಜಾರೋಹಣ ನೆರವೇರಿಸಿದರು.

ನ್ಯಾಷನಲ್‌ ಕಾಲೇಜು: ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕವು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಕಸಾಪ: ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪರಿಷತ್‌ ಅಧ್ಯಕ್ಷ ಮನುಬಳಿಗಾರ್ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು ಕನ್ನಡ ಯುವಜನ ಸಂಘವು ಹೊಂಬೇಗೌಡನಗರದಲ್ಲಿ ಆಯೋಜಿಸಿದ್ದ ಗಣ ರಾಜ್ಯೋತ್ಸವದಲ್ಲಿ ನಿವೃತ್ತ ನ್ಯಾಯ
ಮೂರ್ತಿ ಶೈಲೇಂದ್ರ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘವು ವಿವಿ
ಪುರದ ಸಜ್ಜನ್‍ರಾವ್ ವೃತ್ತದಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಿತು.

ಉದಯಭಾನು ಕಲಾಸಂಘ, ವಿಜಯನಗರದ ಗಾಂಧೀಜಿ ವಿಚಾರ ವೇದಿಕೆ, ಪದ್ಮಿನಿರಾವ್ ಪರಂಪರಾ ಕಲಾಕ್ಷೇತ್ರ ರಂಗಮಂದಿರ, ಡಿ ಗ್ರೂಪ್ ನೌಕರರ ಬಡಾವಣೆ, ಫ್ರೀಡಂ ಪಾರ್ಕ್, ನಂದಿನಿ ಲೇಔಟ್, ರಾಜರಾಜೇಶ್ವರಿನಗರ, ಆರ್.ಟಿ. ನಗರ ಸೇರಿದಂತೆ ನಗರದ ಎಲ್ಲ ಬಡಾವಣೆಗಳಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.