
ಬೆಂಗಳೂರು: ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬ ಚರ್ಚೆ ನಡೆದಿದೆ.
ಜಂಟಿ ಅಧಿವೇಶನಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳು ಇದ್ದವು ಎನ್ನುವ ಕಾರಣಕ್ಕೆ ಅಧಿವೇಶನಕ್ಕೆ ಬರಲು ರಾಜ್ಯಪಾಲರು ಮೊದಲು ನಿರಾಕರಿಸಿದ್ದರು. ಕಾನೂನು ಸಚಿವ ಎಚ್.ಕೆ.ಪಾಟೀಲ ನೇತೃತ್ವದ ನಿಯೋಗವು, ರಾಜ್ಯಪಾಲರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸಿತ್ತು.
‘ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ನ್ಯಾಯಯುತ ಪಾಲು ಕೊಡುತ್ತಿಲ್ಲ ಹಾಗೂ ಕೇಂದ್ರದ ಯೋಜನೆಗಳನ್ನು ಟೀಕಿಸುವ ಕೆಲ ಸಾಲುಗಳನ್ನು ತೆಗೆದು ಹಾಕಬೇಕು’ ಎಂಬ ರಾಜ್ಯಪಾಲರ ಸೂಚನೆಗೆ ರಾಜ್ಯ ಸರ್ಕಾರ ಸಮ್ಮತಿಸಿರಲಿಲ್ಲ. ಹಾಗಾಗಿ, ಜಂಟಿ ಅಧಿವೇಶನಕ್ಕೆ ಹಾಜರಾದರೂ ಭಾಷಣದ ಮೊದಲ ಹಾಗೂ ಕೊನೆಯ ಸಾಲುಗಳನ್ನಷ್ಟೇ ಓದಿದ್ದ ರಾಜ್ಯಪಾಲರು ನಿರ್ಗಮಿಸಿದ್ದರು. ನಂತರ ನಡೆದ ಬೆಳವಣಿಗೆಗಳು, ಭಾಷಣದ ಮೊಟಕು ವಿಚಾರ ಉಭಯ ಸದನಗಳಲ್ಲೂ ಆಡಳಿತ–ವಿರೋಧ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಎರಡನೇ ದಿನದ ಕಲಾಪ ಕೋಲಾಹಲದಲ್ಲೇ ಅಂತ್ಯವಾಗಿತ್ತು.
ಗಣರಾಜ್ಯೋತ್ಸವ ಭಾಷಣವನ್ನೂ ರಾಜ್ಯ ಸರ್ಕಾರವೇ ಸಿದ್ಧಪಡಿಸುತ್ತದೆ. ಲೋಕಭವನಕ್ಕೆ ಕಳುಹಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ಕೆಲ ಯೋಜನೆಗಳು, ಅನುದಾನ ಹಂಚಿಕೆಯ ತಾರತಮ್ಯದ ವಿಷಯಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಗೊತ್ತಾಗಿದೆ. ಅಂತಹ ಅಂಶಗಳನ್ನು ಕೈಬಿಟ್ಟು ಭಾಷಣ ಅಂತಿಮಗೊಳಿಸುವಂತೆ ತಮ್ಮ ಸಿಬ್ಬಂದಿಗೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂವಿಧಾನದ ನಿಯಮಗಳ ಪ್ರಕಾರ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಕಡ್ಡಾಯ. ಅವರು ಭಾಷಣದ ಮೊದಲ ಹಾಗೂ ಕೊನೆಯ ಸಾಲುಗಳನ್ನು ಓದಿದರೂ ಅದನ್ನು ಪೂರ್ಣ ಓದಲಾಗಿದೆ ಎಂದೇ ಸದನ ಅಂಗೀಕರಿಸುತ್ತದೆ. ನಂತರ ರಾಜ್ಯಪಾಲರ ಭಾಷಣಕ್ಕೆ ಆಡಳಿತ–ವಿರೋಧ ಪಕ್ಷಗಳ ಸದಸ್ಯರು ವಂದನಾ ನಿರ್ಣಯ ಸಲ್ಲಿಸುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ, ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದಬೇಕು ಎಂಬ ಯಾವ ನಿಯಮಗಳೂ ಇಲ್ಲ. ಹಾಗಾಗಿ, ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರದ ವಿರುದ್ಧದ ಅಂಶಗಳನ್ನು ಕೈಬಿಟ್ಟು ಓದುತ್ತಾರಾ, ಪೂರ್ಣ ಭಾಷಣ ಮಾಡುತ್ತಾರಾ ಎಂಬ ಚರ್ಚೆಗಳು ಬಿರುಸುಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.