ADVERTISEMENT

ಕೃಷಿ ವಿ.ವಿ: ರೈತ ಮಕ್ಕಳಿಗೆ ಅವಕಾಶ ತಪ್ಪಿಸುವ ಹುನ್ನಾರ

ಮುಖ್ಯಮಂತ್ರಿಗೆ ರೈತ ಸಂಘ ಪತ್ರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 19:21 IST
Last Updated 29 ಆಗಸ್ಟ್ 2020, 19:21 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ   

ಬೆಂಗಳೂರು: 'ಕೊರೊನಾ ನೆಪವಾಗಿಟ್ಟುಕೊಂಡು ಕೃಷಿ ವಿಶ್ವವಿದ್ಯಾಲಯಗಳ ಪದವಿಗೆ ಕೃಷಿಕರ ಮಕ್ಕಳ ಕೋಟಾದಡಿ ಪ್ರವೇಶ ನೀಡಲು ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ರದ್ದು ಪಡಿಸಿರುವ ಆದೇಶವನ್ನು ಹಿಂಪಡೆಯಬೇಕು' ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೋಡಿಹಳ್ಳಿ ಪತ್ರ ಬರೆದಿದ್ದಾರೆ.

‘ಪರೀಕ್ಷೆ ರದ್ದುಪಡಿಸಿ ಹೊರಡಿಸಿರುವ ಆದೇಶದಲ್ಲಿ ಕೃಷಿಕರ ಮಕ್ಕಳ ಕೋಟಾದಡಿ ಇರುವ ಶೇ 40ರಷ್ಟು ಸೀಟುಗಳನ್ನು ವಿದ್ಯಾರ್ಥಿಗಳ ದ್ವಿತೀಯ ಪಿಯು ಪರೀಕ್ಷೆಯಲ್ಲಿನ ಶೇ 50 ಅಂಕ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಪಡೆದ ಶೇ 50ರಷ್ಟು ಅಂಕಗಳನ್ನು ಸೇರಿಸಿ ಮೆರಿಟ್ ಪಟ್ಟಿ ತಯಾರಿಸುವಂತೆ ಸೂಚಿಸಿದೆ. ಇದು ಕೃಷಿಕರ ಮಕ್ಕಳನ್ನು ಅವಕಾಶ ವಂಚಿತರನ್ನಾಗಿ ಮಾಡುವ ಹುನ್ನಾರ' ಎಂದು ದೂರಿದ್ದಾರೆ.

'ಸಿಇಟಿ ಪರೀಕ್ಷೆಯಲ್ಲಿ ನಗರ ಭಾಗದ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಗ್ರಾಮೀಣ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿರುತ್ತಾರೆ. ಈ ನೂತನ ನಿಯಮದಿಂದ ರಾಜ್ಯದಲ್ಲಿ ಕನಿಷ್ಠ ಮೂರು ಸಾವಿರ ಕೃಷಿ ವಿದ್ಯಾರ್ಥಿಗಳು ಕೃಷಿಕರ ಕೋಟಾದಿಂದ ಅವಕಾಶ ವಂಚಿತರಾಗುತ್ತಾರೆ' ಎಂದರು.

ADVERTISEMENT

'ಕೃಷಿಕರ ಮಕ್ಕಳ ಶೇ 40ರ ಮೀಸಲಾತಿಯನ್ನು ಕೈ ತಪ್ಪಿಸುವ ಉದ್ದೇಶದಿಂದಲೇ ಸರ್ಕಾರದ ಕೆಲ ಅಧಿಕಾರಿಗಳು ಕೊರೊನಾ ನೆಪದಲ್ಲಿ ಪರೀಕ್ಷೆ ರದ್ದುಪಡಿಸಿದ್ದಾರೆ. ಕೃಷಿಕರ ಮಕ್ಕಳಿಗೆ ಕೃಷಿಯ ಜ್ಞಾನ ಹೆಚ್ಚಾಗಿರುವುದರಿಂದ ಅವರಿಗೆ ಪ್ರವೇಶಾತಿಯಲ್ಲಿ ಶೇ 90ರಷ್ಟು ಮೀಸಲಾತಿ ಸಿಗಬೇಕು. ಆದರೆ, ಇರುವ ಕನಿಷ್ಠ ಮೀಸಲಾತಿಯನ್ನೂ ಕಸಿಯುತ್ತಿರುವ ಕ್ರಮ ಸರಿಯಲ್ಲ. ಕೂಡಲೇ ಪರೀಕ್ಷೆ ರದ್ದತಿ ಆದೇಶ ಹಿಂಪಡೆದು, ಎಂದಿನಂತೆ ಪರೀಕ್ಷೆಗಳನ್ನು ನಡೆಸಬೇಕು. ಇಲ್ಲದಿದ್ದರೆ, ರಾಜ್ಯಮಟ್ಟದಲ್ಲಿ ರೈತಮಕ್ಕಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.