ADVERTISEMENT

ಯತ್ನಾಳ ಉಚ್ಚಾಟನೆ ವಾಪಸ್‌ಗೆ ಮನವಿ: BJP ವರಿಷ್ಠರ ಮನವೊಲಿಸಲು ಮುಂದಾದ ಬೆಂಬಲಿಗರು

ಪಕ್ಷ ಕಟ್ಟುವುದಿಲ್ಲ, ತೊರೆಯುವುದಿಲ್ಲ ಎಂದು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 15:48 IST
Last Updated 28 ಮಾರ್ಚ್ 2025, 15:48 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

– ಫೇಸ್‌ಬುಕ್ ಚಿತ್ರ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವ ಆದೇಶ ಹಿಂಪಡೆಯುವಂತೆ ಬಿಜೆಪಿ ವರಿಷ್ಠರ ಮನವೊಲಿಸಲು ಯತ್ನಾಳ ಬಣ ನಿರ್ಧರಿಸಿದೆ.

ADVERTISEMENT

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಿದ ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ. ಹರೀಶ್‌, ಮಾಜಿ ಸಚಿವ ಕುಮಾರ್‌ ಬಂಗಾರಪ್ಪ, ಮುಖಂಡ ಎನ್‌.ಆರ್‌. ಸಂತೋಷ್‌ ಮೊದಲಾದವರು, ಉಚ್ಚಾಟನೆ ಪ್ರಕರಣವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. 

ರಾಜ್ಯ ಘಟಕದ ಅಧ್ಯಕ್ಷರ ಸರ್ವಾಧಿಕಾರಿ ಮನೋಭಾವ, ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ಕುಸಿತ, ಪಕ್ಷ ಕಟ್ಟಿ ಬೆಳೆಸಿದ, ಪಕ್ಷಕ್ಕೆ ಆಸರೆಯಾಗಿ ನಿಂತ ಹಿರಿಯ ನಾಯಕರ ಕಡೆಗಣನೆ, ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಭವಿಷ್ಯದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವುದು, 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದೂ ಸೇರಿದಂತೆ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿರುವ ನಾಯಕರಲ್ಲಿರುವ ಪಕ್ಷ ನಿಷ್ಠೆ ಕುರಿತು ಅರ್ಥಮಾಡಿಸಬೇಕು ಎಂದು ನಿರ್ಧಾರಕ್ಕೆ ಬಂದಿದ್ದಾರೆ. 

ಸಭೆಯ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ  ಕುಮಾರ್‌ ಬಂಗಾರಪ್ಪ, ‘ಯತ್ನಾಳ ಅವರ ಉಚ್ಚಾಟನೆ ಕ್ರಮ ಆಘಾತ ತಂದಿದೆ. ಪಕ್ಷದ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರಿಗೆ ನೋವಾಗಿದೆ. ಈ ನಿರ್ಧಾರ ಪುನರ್‌ಪರಿಶೀಲಿಸಲು ವರಿಷ್ಠರನ್ನು ಕೋರಲು ತೀರ್ಮಾನಿಸಿದ್ದೇವೆ’ ಎಂದರು.

‘ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವ ರಕ್ಷಣೆಗೆ ಧ್ವನಿ ಎತ್ತಿರುವ ನಾವ್ಯಾರೂ ಪಕ್ಷ ತೊರೆಯುವುದಿಲ್ಲ, ಬೇರೆ ಪಕ್ಷ ಕಟ್ಟುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಪಕ್ಷದ ಉಳಿವಿಗೆ ಹೋರಾಟ ನಡೆಸುತ್ತೇವೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮೊದಲು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ನಿಲುವು. ಅದಕ್ಕಾಗಿ ನಮ್ಮ ಅಹವಾಲು ಆಲಿಸಬೇಕು’ ಎಂದು ಹೇಳಿದರು.

‘ಸ್ವಾಮೀಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ’

‘ಯತ್ನಾಳ ಅವರ ಉಚ್ಚಾಟನೆ ವಾಪಸ್​​ ಪಡೆಯುವಂತೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವುದು ಆಶ್ಚರ್ಯ ತಂದಿದೆ.‌ ನಮ್ಮದು ರಾಜಕೀಯ ಪಕ್ಷ, ಅವರದ್ದು ಮಠ. ಸ್ವಾಮೀಜಿ ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು’ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ಯತ್ನಾಳ ಬಣ ಮತ್ತೆ ಸಭೆ ಸೇರಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲವನ್ನೂ ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಯತ್ನಾಳ್‌ ಉಚ್ಚಾಟನೆ ಹಿಂಪಡೆಯುವಂತೆ ಕೇಳುವ ಹಕ್ಕು ಕಾರ್ಯಕರ್ತರಿಗಿದೆ’ ಎಂದರು.

ಎಸ್‌.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್‌ ಉಚ್ಚಾಟನೆ ಆಗಲಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸಲಿದ್ದಾರೆ.ಬಿಜೆಪಿಯಲ್ಲಿ ನಾವೆಲ್ಲರೂ ಒಂದಾಗಿ ಹೋಗಬೇಕು ಎಂಬ ಅಭಿಪ್ರಾಯ ನನ್ನದು. ಪಕ್ಷದ ಹಿರಿಯರು ಕೈಗೊಂಡ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ’ ಎಂದರು.

ಪಕ್ಷದ ಪರ ನಿಂತಿದ್ದೇವೆ: ರೇಣುಕಾಚಾರ್ಯ

‘ನಾನು ಹಾಗೂ ನನ್ನ ಜತೆ ಇರುವವರು ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷ ಹಾಗೂ ಪಕ್ಷದ ಅಧ್ಯಕ್ಷ, ವರಿಷ್ಠರ ವಿರುದ್ಧ ಹೇಳಿಕೆ ನೀಡಿಲ್ಲ. ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ನೀಡಿದ್ದೇವೆ’ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವರು ಪಕ್ಷ ಕಟ್ಟಿ, ಬೆಳೆಸಿದ್ದಾರೆ. ಬಿ.ವೈ. ವಿಜಯೇಂದ್ರ ಅವರನ್ನು ವರಿಷ್ಠರು ನೇಮಕ ಮಾಡಿದ್ದಾರೆ. ಅವರ ವಿರುದ್ಧ ಕೆಲವರು ನಿರಂತರ ಟೀಕೆ ಮಾಡಿದ್ದನ್ನು ಖಂಡಿಸಿದ್ದೇವೆ. ಪಕ್ಷ ವಿರೋಧಿ ನಡೆ ಪ್ರದರ್ಶಿಸಿಲ್ಲ. ಹಾಗಾಗಿ, ನೋಟಿಸ್‌ಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.