ನವದೆಹಲಿ: ದ್ರಾಕ್ಷಿ ಕೃಷಿ ಹಾಗೂ ವೈನ್ ಉದ್ಯಮದಲ್ಲಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ₹100 ಕೋಟಿ ಅನುದಾನ ನೀಡಬೇಕು ಎಂದು ಕೇಂದ್ರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷ ಬಿ. ಯೋಗೇಶ ಬಾಬು ಮನವಿ ಮಾಡಿದರು.
ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಅವರು, ‘ರಾಜ್ಯದಲ್ಲಿ 32,473 ಹೆಕ್ಟೇರ್‌ನಲ್ಲಿ ವಾರ್ಷಿಕ 8.21 ಲಕ್ಷ ಟನ್ ದ್ರಾಕ್ಷಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಬೆಳೆ ಪ್ರದೇಶದ ವಿಸ್ತರಣೆಗೆ ವ್ಯಾಪಕ ಅವಕಾಶ ಇದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಯೋಜನೆಯಡಿ ಅನುದಾನ ಮಂಜೂರು ಮಾಡಬೇಕು’ ಎಂದು ಕೋರಿದರು.
ದ್ರಾಕ್ಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಸುಧಾರಿತ ದ್ರಾಕ್ಷಿ ಬೇಸಾಯ ಪದ್ಧತಿ ಉತ್ತೇಜಿಸಲಾಗುತ್ತದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ದ್ರಾಕ್ಷಿ ಹಾಗೂ ದ್ರಾಕ್ಷಿ ಉತ್ಪನ್ನಗಳನ್ನು ವ್ಯಾಪಕ ಪ್ರಮಾಣದಲ್ಲಿ ಒದಗಿಸಲು ಉದ್ದೇಶಿಸಲಾಗಿದೆ. ಒಣ ದ್ರಾಕ್ಷಿ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗುತ್ತದೆ. ಒಣ ದ್ರಾಕ್ಷಿಗಳನ್ನು ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸಲಾಗುತ್ತದೆ. ಇದಕ್ಕಾಗಿ ವಿಜಯಪುರದ ತೊರವಿಯಲ್ಲಿ 141 ಎಕರೆ ಜಾಗ ಗುರುತಿಸಲಾಗಿದೆ. ಈ ಎಲ್ಲ ಉಪಕ್ರಮಗಳಿಗೆ ಕೇಂದ್ರ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.