ADVERTISEMENT

ಒಡಿಶಾ ರೈಲು ಅವಘಡ: ಕನ್ನಡಿಗರ ಮಾಹಿತಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 8:33 IST
Last Updated 4 ಜೂನ್ 2023, 8:33 IST
   

ಬೆಂಗಳೂರು: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿರುವ ರೈಲು ಅಪಘಾತದಲ್ಲಿ ಗಾಯಗೊಂಡವರು ಮತ್ತು ತೊಂದರೆಗೆ ಸಿಲುಕಿರುವವರಲ್ಲಿ ಇರುವ ಕನ್ನಡಿಗರನ್ನು ರಕ್ಷಿಸಿ ಕರೆತರಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ತೆರಳಿರುವ ತಂಡವು ಮಾಹಿತಿ ಸಿಗದೆ ಇಕ್ಕಟ್ಟಿಗೆ ಸಿಲುಕಿದೆ.

ಮೃತರಲ್ಲಿ ಕನ್ನಡಿಗರಿದ್ದರೆ ಗುರುತಿಸಿ, ಮೃತದೇಹಗಳನ್ನು ತರುವುದು, ಗಾಯಾಳುಗಳು ಹಾಗೂ ಅಪಘಾತದ ಸ್ಥಳದಲ್ಲಿ ಸಿಲುಕಿರುವ ಪ್ರಯಾಣಿಕರಲ್ಲಿರುವ ರಾಜ್ಯದವರನ್ನು ಕರೆತರಲು ಲಾಡ್ ನೇತೃತ್ವದ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಿಸಿದ್ದಾರೆ. ತಂಡವು ಶನಿವಾರ ಸಂಜೆಯೇ ಬಾಲಸೋರ್‌ ತಲುಪಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ಕೂಡ ಈ ತಂಡದಲ್ಲಿದ್ದಾರೆ.

‘ಶನಿವಾರ ಸಂಜೆಯೇ ಬಾಲಸೋರ್‌ ತಲುಪಿದ್ದೇವೆ. ಘಟನಾ ಸ್ಥಳದಲ್ಲಿ ಹೆಚ್ಚು ಮಾಹಿತಿ ದೊರಕಿಲ್ಲ. ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಕುರಿತು ಮಾಹಿತಿ ಪಡೆದಿದ್ದೇವೆ. ಈವರೆಗೆ ಕರ್ನಾಟಕದ ಯಾರೂ ಪತ್ತೆಯಾಗಿಲ್ಲ. ಕನ್ನಡಿಗರಿದ್ದರೆ ಗುರುತಿಸಿ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರಿಯಲಿದೆ’ ಎಂದು ಸಂತೋಷ್‌ ಲಾಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಿರಂತರ ಪ್ರಯತ್ನದ ಬಳಿಕ ಒಡಿಶಾ ಸರ್ಕಾರವು ಗಾಯಾಳುಗಳ ಪಟ್ಟಿಯೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಪ್ರಯಾಣಿಕರು ಯಾವ ರಾಜ್ಯದವರೆಂಬ ಮಾಹಿತಿ ಇಲ್ಲ. ಹೀಗಾಗಿ, ಕರ್ನಾಟಕದವರನ್ನು ಗುರುತಿಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಸಹಾಯವಾಣಿಗೂ ಯಾವುದೇ ಕರೆ ಬಂದಿಲ್ಲ’ ಎಂದು ಮನೋಜ್‌ ಮಾಹಿತಿ ನೀಡಿದರು.

ಪ್ರಯಾಣಿಕರಿಗೆ ಮುಖ್ಯಮಂತ್ರಿ ಕರೆ:

ಮೈಸೂರಿನ 30 ಮಂದಿ ಪ್ರಯಾಣಿಕರು ಬಾಲಸೋರ್‌ನಲ್ಲಿ ಸಿಲುಕಿರುವ ಕುರಿತು ಮುಖ್ಯಮಂತ್ರಿಯವರಿಗೆ ಮಾಹಿತಿ ದೊರಕಿತು. ಶನಿವಾರ ಸಂಜೆ ದೂರವಾಣಿ ಮೂಲಕ ಪ್ರಯಾಣಿಕರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಧೈರ್ಯ ತುಂಬಿದರು. ವಾಪಸ್‌ ರಾಜ್ಯಕ್ಕೆ ಬರಲು ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.