ADVERTISEMENT

ಸಮೀಕ್ಷೆ ವೇಳೆ ವೃತ್ತಿ ಆಧಾರಿತ ಜಾತಿಗಳಲ್ಲೇ ಭೇದ: ಶಂಕರ ಬಿದರಿ ಆರೋಪ

ಆಯೋಗದ ವಿರುದ್ಧ ವೀರಶೈವ–ಲಿಂಗಾಯತ ಮಹಾಸಭಾ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 16:04 IST
Last Updated 24 ಏಪ್ರಿಲ್ 2025, 16:04 IST
ಶಂಕರ ಬಿದರಿ
ಶಂಕರ ಬಿದರಿ   

ಬೆಂಗಳೂರು: ಲಿಂಗಾಯತ ಪಂಥಕ್ಕೆ ಸೇರಿದ ಅತ್ಯಂತ ಹಿಂದುಳಿದ, ವೃತ್ತಿ ಆಧಾರಿತ ಜಾತಿಗಳನ್ನು ಪ್ರವರ್ಗ 3 ‘ಬಿ’ಗೆ ಸೇರಿಸುವ ಮೂಲಕ ಹಿಂದುಳಿದ ವರ್ಗಗಳ ಆಯೋಗ ಘೋರ ಅಪರಾಧ ಎಸಗಿದೆ ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಾಲ್ಕು ವರ್ಣಗಳಿಗೆ ಸೇರಿದ 99ಕ್ಕೂ ಹೆಚ್ಚು ವೃತ್ತಿಗಳ ಜನರು 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಪಂಥಕ್ಕೆ ಸೇರ್ಪಡೆಯಾದರು. ಅದೇ ವೃತ್ತಿಯ ಕೆಲವರು ಸನಾತನ ಹಿಂದೂ ಧರ್ಮದ ಭಾಗವಾಗಿಯೇ ಮುಂದುವರಿದಿದ್ದಾರೆ. ಹಿಂದೂ ಧರ್ಮ ಹಾಗೂ ಲಿಂಗಾಯತ ಪಂಥಗಳಲ್ಲಿ ವಿಭಜಿತವಾದರೂ ಎರಡೂ ಕಡೆ ಗುರುತಿಸಿಕೊಂಡಿರುವ ಅವರ ವೃತ್ತಿ ಇಂದಿಗೂ ಒಂದೇ ತೆರನಾಗಿವೆ. ಆದರೆ, ಹಿಂದುಳಿದ ಜಾತಿಗಳನ್ನು ವಿಂಗಡಿಸುವಾಗ ಆಯೋಗ ಭೇದ ಮಾಡಿದೆ. ಇಂತಹ ತಾರತಮ್ಯ ಸರಿಯಲ್ಲ ಎಂದು ದೂರಿದರು.

‘99ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡ ಕಾರಣಕ್ಕಾಗಿಯೇ ಲಿಂಗಾಯತವನ್ನು ಒಂದು ಪಂಥ ಅಥವಾ ಧರ್ಮ ಎಂದು ಪರಿಗಣಿಸಬೇಕು ಎಂದು ಮಹಾಸಭಾ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. ಆದರೂ, ಹಿಂದೂ ಧರ್ಮದ ಒಂದು ಭಾಗವಾಗಿಯೇ ಗುರುತಿಸಲಾಗುತ್ತಿದೆ. ಈಗ ಒಂದೇ ತೆರನಾದ ವೃತ್ತಿ ಆಧಾರಿತ ಜಾತಿಗಳನ್ನು ವಿಭಜಿಸಿದ್ದಾರೆ. ಲಿಂಗಾಯತ ಪಂಥದ ಜಾತಿಗಳನ್ನು ಪ್ರವರ್ಗ 3 ‘ಬಿ’ಗೆ ಸೇರಿಸಿ, ಹಿಂದೂ ಧರ್ಮದ ಅದೇ ಜಾತಿಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಪ್ರವರ್ಗಗಳಿಗೆ ಸೇರಿಸಲಾಗಿದೆ. ಈ ತಾರತಮ್ಯವನ್ನು ಖಂಡಿಸುತ್ತೇವೆ’ ಎಂದರು.   

ADVERTISEMENT

ಸಂಪುಟ ಟಿಪ್ಪಣಿ ವರದಿಯಲ್ಲಿ ವ್ಯತ್ಯಾಸ

ಸಂಪುಟ ಸಭೆಗೆ ಮಂಡಿಸಿದ ಟಿಪ್ಪಣಿಯಲ್ಲಿ ‘ಆಯೋಗದ ಮಾನದಂಡದ ಪ್ರಕಾರ 20ರಿಂದ 149 ಅಂಕಗಳನ್ನು ಪಡೆದ ಜಾತಿಗಳನ್ನು ಸೇರಿಸಲಾಗಿದೆ’ ಎಂದು ನಮೂದಿಸಲಾಗಿದೆ.  ಸಚಿವರಿಗೆ ನೀಡಿದ ಆಯೋಗದ ದತ್ತಾಂಶ ವರದಿಯಲ್ಲಿ 20ರಿಂದ 49 ಅಂಕಗಳು ಎಂದು ನಮೂದಿಸಲಾಗಿದೆ. ಈ ಕುರಿತು ಸರ್ಕಾರ ಹಾಗೂ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಶಂಕರ ಬಿದರಿ ಒತ್ತಾಯಿಸಿದರು. ಹಿಂದೂ ಧರ್ಮದ ಜಾತಿಗಳಿಗೆ ಅತಿ ಹೆಚ್ಚು ಅಂಕ ಹಾಗೂ ಲಿಂಗಾಯತ ಪಂಥದ ಜಾತಿಗಳಿಗೆ ಅತಿ ಕಡಿಮೆ ಅಂಕ ನೀಡಲಾಗಿದೆ. ಈ ವೃತ್ತಿ ಆಧಾರಿತ ಜಾತಿಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು ಒಂದೇ ತೆರನಾಗಿ ಇದ್ದರೂ ಅಂಕ ನೀಡುವಿಕೆಯಲ್ಲೂ ತಾರತಮ್ಯ ಮಾಡಲಾಗಿದೆ ಎಂದರು.

ಜನವರಿಯಿಂದ ಲಿಂಗಾಯತರ ಗಣತಿ ವೀರಶೈವ–ಲಿಂಗಾಯತ ಪಂಥದ ಎಲ್ಲ ಜಾತಿಗಳ ಗಣತಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಹಾಸಭಾ ನಡೆಸಲಿದೆ. 2026ರ ಜನವರಿಯಿಂದ ಡಿಸೆಂಬರ್‌ರವರೆಗೆ ಇದನ್ನು ನಡೆಸಲಾಗುವುದು ಎಂದು ಶಂಕರ ಬಿದರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.