ADVERTISEMENT

ಅಸ್ಪೃಶ್ಯ ಅಲೆಮಾರಿಗಳಿಗೆ ಪ್ರತ್ಯೇಕ ಒಳಮೀಸಲು ಕೊಡಿ: ಮುಖ್ಯಮಂತ್ರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:21 IST
Last Updated 30 ಅಕ್ಟೋಬರ್ 2025, 14:21 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ&nbsp;</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅತ್ಯಂತ ಹಿಂದುಳಿದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಶೇಕಡ 1ರಷ್ಟು ಒಳಮೀಸಲಾತಿಯನ್ನು ನೀಡಬೇಕು’ ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ನೇತೃತ್ವದ ‘ನ್ಯಾಷನಲ್‌ ಅಲಯನ್ಸ್‌ ಆಫ್‌ ಪೀಪಲ್ಸ್‌ ಮೂವ್‌ಮೆಂಟ್ಸ್‌’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ADVERTISEMENT

‘ರಾಜ್ಯದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ 600ಕ್ಕೂ ಹೆಚ್ಚು ಪ್ರತಿನಿಧಿಗಳು ದೆಹಲಿಯಲ್ಲಿ ಅಕ್ಟೋಬರ್ 1ರಿಂದ 15ರವರೆಗೆ ಪ್ರತಿಭಟನೆ ನಡೆಸಿದ್ದರು. ಆಗ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಒಳಮೀಸಲಾತಿ ನೀಡುವ ಸಂಬಂಧ ದೀಪಾವಳಿಯ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

‘ಈ ಸಮುದಾಯಗಳಿಗೆ ಪ್ರತ್ಯೇಕ ಒಳಮೀಸಲಾತಿ ನೀಡುವ ಸಂಬಂಧ ಶುಕ್ರವಾರ ಸಭೆ ನಡೆಸಲಿದ್ದೀರಿ. ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅವರ ಆಯೋಗದ ಶಿಫಾರಸಿನಂತೆ ಈ ಸಮುದಾಯಗಳಿಗೆ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ಘೋಷಿಸಬೇಕು. ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು’ ಎಂದು ಕೋರಿದೆ.

‘ಶಿಕ್ಷಣದಲ್ಲಿ ಈ ಸಮುದಾಯಗಳು ಬಹಳ ಹಿಂದೆ ಉಳಿದಿವೆ. ಶೈಕ್ಷಣಿಕವಾಗಿ ಅವರನ್ನು ಮುಂದಕ್ಕೆ ತರಲು ಸರ್ಕಾರವು ವಿಶೇಷ ಕಾರ್ಯಕ್ರಮ ರೂಪಿಸಬೇಕು. ಅವುಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.