
ಮೀಸಲಾತಿ (ಸಾಂಕೇತಿಕ ಚಿತ್ರ)
ಬೆಂಗಳೂರು: ‘ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರವಾದ ದಲಿತರಿಗೂ ರಾಜಕೀಯ, ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರೂಪಿಸಬೇಕು’ ಎಂದು ಅಹಿಂದ ಚಳವಳಿ ಸಂಘಟನೆಯು ಒತ್ತಾಯಿಸಿದೆ.
ಸಂಘಟನೆಯ ಪರವಾಗಿ ಸಿ.ಎಂ.ಇಬ್ರಾಹಿಂ, ಮೊಹಿದ್ದೀನ್ ಬಾವ, ವಿಜಯಲಕ್ಷ್ಮಿ ಅರಸ್, ತನ್ವೀರ್ ಸೇಠ್ ಮತ್ತು ಐವನ್ ಡಿಸೋಜ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಆರ್.ಮಧುಸೂಧನ ನಾಯಕ್ ಅವರನ್ನು ಬುಧವಾರ ಭೇಟಿ ಮಾಡಿ, ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.
‘ಬೌದ್ಧ ಮತ್ತು ಸಿಖ್ ಧರ್ಮಕ್ಕೆ ಮತಾಂತರವಾದ ದಲಿತರಿಗೆ ರಾಜಕೀಯ, ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಈ ಸವಲತ್ತನ್ನು, ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೂ ವಿಸ್ತರಿಸಬೇಕು. ಇದಕ್ಕಾಗಿ 1950ರ ರಾಷ್ಟ್ರಪತಿಯ ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ರಾಜ್ಯ ವಿಧಾನಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು. ಇದಕ್ಕಾಗಿ ಸರ್ಕಾರ ಶಿಫಾರಸು ಮಾಡಬೇಕು’ ಎಂದು ಆಯೋಗವನ್ನು ಒತ್ತಾಯಿಸಿದ್ದಾರೆ.
‘ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ– ದೌರ್ಜನ್ಯದ ಪ್ರಕರಣಗಳನ್ನು ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಪ್ರತ್ಯೇಕವಾಗಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರೂಪಿಸಬೇಕು. ಇಂತಹ ಪ್ರಕರಣಗಳ ದಾಖಲಾತಿ ಮತ್ತು ನಿರ್ವಹಣೆಗೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಬೇಕು’ ಎಂದು ಕೋರಿದೆ.
‘ಮುಸ್ಲಿಮರಿಗಾಗಿ ‘ಹಜ್ ಭವನ’ ನಿರ್ಮಿಸಿರುವಂತೆ ಕ್ರೈಸ್ತರಿಗೆ ‘ಕ್ರೈಸ್ತ ಭವನ’, ಜೈನರಿಗೆ ‘ಜೈನ ಭವನ’ ಸ್ಥಾಪಿಸಬೇಕು’ ಎಂದು ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.