ADVERTISEMENT

ಒಕ್ಕಲಿಗರಿಗೆ ಮೀಸಲಾತಿ; ಸ್ವಾಮೀಜಿ ಜೊತೆ ಮಾತುಕತೆ– ಅಶೋಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 12:42 IST
Last Updated 27 ಅಕ್ಟೋಬರ್ 2022, 12:42 IST
ಕಂದಾಯ ಸಚಿವ ಆರ್‌.ಅಶೋಕ
ಕಂದಾಯ ಸಚಿವ ಆರ್‌.ಅಶೋಕ   

ಕೋಲಾರ: ‘ಒಕ್ಕಲಿಗರ ಮೀಸಲಾತಿ ವಿಚಾರವಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕರೆ ಮಾಡಿದ್ದರು. ಈ ಸಂಬಂಧ ಮಾತುಕತೆಗೆ ಬರುವುದಾಗಿ ಹೇಳಿದ್ದೇನೆ. ಸ್ವಾಮೀಜಿ ಜೊತೆ ಕುಳಿತು ಚರ್ಚಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಪರಿಶಿಷ್ಟ ಪಂಗಡದವರಿಗೆ ಮಾತುಕೊಟ್ಟಂತೆ ನಡೆದುಕೊಂಡು ದೀಪಾವಳಿಯ ಉಡುಗೊರೆ ನೀಡಿದ್ದೇವೆ. ಇದು ಜೇನುಗೂಡಿಗೆ ಕೈಹಾಕಿದಂತೆ ಎಂದು ಕೆಲವರು ಬೆದರಿಸಿದ್ದರು. ಆದರೆ, ಈಗ ಏನೂ ಆಗಲಿಲ್ಲ’ ಎಂದರು.

‘ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ವಿಚಾರವಾಗಿ ಸಂಬಂಧಪಟ್ಟ ಆಯೋಗ ಸಲ್ಲಿಸಿದ ವರದಿ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು. ಸಮುದಾಯಗಳ ಜನಸಂಖ್ಯೆ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ಕಾಂಗ್ರೆಸ್‌ನಂತೆ ಯಾರನ್ನೂ ತುಳಿಯುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಹಿಂದುತ್ವ ಆಧಾರಿತ ಪಕ್ಷ: ‘ಬಿಜೆಪಿಯು ಭಾರತೀಯ ಹಿಂದುತ್ವದ ಆಧಾರದ ಮೇಲೆ ಇರುವಂಥ ಪಕ್ಷ. ಎಲ್ಲಾ ಜಾತಿಗಳಿಗೆ ನಮ್ಮಲ್ಲಿ ಸಾಮಾಜಿಕ ನ್ಯಾಯ ಸಿಗುತ್ತದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಜಾತಿ, ಧರ್ಮದ ಮೇಲೆ ತೀರ್ಮಾನ ಮಾಡುವುದಿಲ್ಲ.

‘ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡುವರು ಮುಖ್ಯಮಂತ್ರಿ ಆಗಿಲ್ಲ. ನಮ್ಮ ಪಕ್ಷದಲ್ಲಿ ಬಹಳಷ್ಟು ಒಕ್ಕಲಿಗ ಮುಖಂಡರು ಇದ್ದಾರೆ. ನಾನೂ ಆಕಾಂಕ್ಷಿ. ಆದರೆ, ಡಿ.ಕೆ.ಶಿವಕುಮಾರ್‌ ರೀತಿ ಬಿಸಿಲು ಕುದುರೆಯ ಹಿಂದೆ ಓಡುವ ನಾಯಕ ನಾನಲ್ಲ. ಆ ರೀತಿ ಹೋದವರ ಕಥೆ ಏನಾಗಿದೆ ಎನ್ನುವುದು ನಿಮಗೂ ಗೊತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ನಡೆಯಲಿದೆ. ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕ’ ಎಂದು ನುಡಿದರು.ಸಾಮಾಜಿಕ ನ್ಯಾಯ ಹಾಗೂ ಇತರ ವಿಚಾರ ನೋಡಿಕೊಂಡು ಪಕ್ಷ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.