ADVERTISEMENT

ಒಬಿಸಿಯಡಿ ಮುಸ್ಲಿಮರಿಗೆ ಮೀಸಲಾತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ಹಿಂದುಳಿದ ವರ್ಗದ ಅಡಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ. ಬಿಜೆಪಿಯವರು ಆರೋಪಿಸುತ್ತಿರುವಂತೆ ಅದು ಧರ್ಮಾಧಾರಿತ ಮೀಸಲಾತಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಪ್ರತಿಪಾದಿಸಿದರು.

ಬಜೆಟ್ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷಗಳ ಸದಸ್ಯರು ಎತ್ತಿದ್ದ ಆಕ್ಷೇಪಗಳಿಗೆ ಶುಕ್ರವಾರ ಅವರು ಉತ್ತರ ನೀಡಿದರು. ‘ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್‌’ ಎನ್ನುತ್ತಾರೆ. ಮುಸ್ಲಿಮರು ಹಿಂದುಳಿದ ಸಮುದಾಯದವರು. ಅವರಿಗೆ ನೀಡಿರುವ ಮೀಸಲಾತಿಗೆ ಆಕ್ಷೇಪ ಎತ್ತುವುದು, ನಿಮ್ಮದೇ ಪಕ್ಷದ ಪ್ರಧಾನಿ ಅವರ ‘ಎಲ್ಲರ ವಿಕಾಸ’ ನೀತಿಯನ್ನು ವಿರೋಧಿಸಿದಂತೆ’ ಎಂದರು.

ADVERTISEMENT

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಪ್ರವರ್ಗ–1, 2ಎ ಮತ್ತು 2ಬಿ ಸಮುದಾಯದ ಗುತ್ತಿಗೆದಾರರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿ ಒದಗಿಸುವುದು ಅನಿವಾರ್ಯ. ನಮ್ಮ ಸರ್ಕಾರ ಅದನ್ನು ಮಾಡಿದೆ’ ಎಂದು ಹೇಳಿದರು.

‘1919ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಸಮಿತಿ ಶಿಫಾರಸಿನಿಂತೆ ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳಿಗೆ ಶೇ 82ರಷ್ಟು ಮೀಸಲಾತಿ ನೀಡಿದ್ದರು. ಕಾಂತರಾಜ ಅರಸ್‌ ಅವರು ದಿವಾನರಾಗಿದ್ದಾಗ ಈ ವರದಿ ಜಾರಿಗೆ ತರಲಾಯಿತು’ ಎಂದು ಉದಾಹರಿಸಿದರು.

‘ಸ್ವಾತಂತ್ರ್ಯದ ಬಳಿಕ ಕರ್ನಾಟಕದ ಸರ್ಕಾರವು ಸಂವಿಧಾನದ 15(4),16(4)ನೇ ವಿಧಿಗಳ ಪ್ರಕಾರ ಮೀಸಲಾತಿ ನೀಡುತ್ತಲೇ ಬಂದಿದೆ. ಈ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಮೀಸಲಾತಿ ಕೊಡಬಹುದೆಂದು ರಾಜ್ಯದ ಹಲವು ಸಮಿತಿ ಮತ್ತು ಆಯೋಗಳು ಶಿಫಾರಸು ಮಾಡಿವೆ’ ಎಂದು ವಿವರಿಸಿದರು.

‘ಎಲ್‌.ಜಿ.ಹಾವನೂರ್‌ ಆಯೋಗವು ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ‘ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದ್ದು ಸಮರ್ಥನೀಯ’ ಎಂದು ತೀರ್ಪು ನೀಡಿತ್ತು’ ಎಂದರು.

‘ವೆಂಕಟಸ್ವಾಮಿ ಆಯೋಗವು ಮುಸ್ಲಿಮರನ್ನು ಪ್ರವರ್ಗ–‘ಸಿ’ಗೆ ಸೇರಿಸಿದರೆ, ಓ.ಚಿನ್ನಪ್ಪರೆಡ್ಡಿ ಆಯೋಗವು ಪ್ರತ್ಯೇಕವಾಗಿ ‘2ಬಿ’ ವರ್ಗದಲ್ಲಿ ಸೇರಿಸುವಂತೆ ಶಿಫಾರಸು ಮಾಡಿತು. ಪ್ರೊ.ರವಿವರ್ಮ ಕುಮಾರ್ ಆಯೋಗವೂ ಇದನ್ನೇ ಹೇಳಿತು. ಇದರಂತೆ ಮೀಸಲಾತಿಯನ್ನು ನೀಡುತ್ತಲೇ ಬರಲಾಗಿದೆ’ ಎಂದರು.

‘ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ನೀಡಿಲ್ಲ. ಅವರಿಗೆ ಈವರೆಗೆ 2ಬಿ ಅಡಿ ನೀಡುತ್ತಿದ್ದಂತೆಯೇ ಗುತ್ತಿಗೆಯಲ್ಲೂ ಮೀಸಲಾತಿ ಒದಗಿಸಿದೆ. ಬಿಜೆಪಿಯ ಸದಸ್ಯರನ್ನು ಇವೆಲ್ಲವನ್ನೂ ಪರಿಶೀಲಿಸಿ, ಮಾತನಾಡಬೇಕು’ ಎಂದರು.

ಮುಸ್ಲಿಮರಿಗೆ ಮೀಸಲಾತಿ ವಿರೋಧಿಸುವ ಬಿಜೆಪಿ ಸದಸ್ಯರು ಸ್ವಲ್ಪ ಇತಿಹಾಸ ಓದಿಕೊಂಡರೆ ಒಳ್ಳೆಯದು. ಇತಿಹಾಸದ ತಿಳಿವಳಿಕೆ ಇರುವವರು ಹೀಗೆ ಮಾತನಾಡುವುದಿಲ್ಲ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಗುತ್ತಿಗೆಯಲ್ಲಿ ಮೀಸಲಾತಿ ಮಸೂದೆ ಅಂಗೀಕಾರ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ₹ 2 ಕೋಟಿವರೆಗಿನ ವೆಚ್ಚದ ಕಾಮಗಾರಿಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ–2ಬಿಗೆ ಸೇರಿದ ಸಮುದಾಯಗಳ (ಮುಸ್ಲಿಂ) ಗುತ್ತಿಗೆದಾರರಿಗೆ ಶೇಕಡ 4ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ–2025’ಕ್ಕೆ ವಿಧಾನಮಂಡಲದ ಉಭಯ ಸದನಗಳು ಶುಕ್ರವಾರ ಅಂಗೀಕಾರ ನೀಡಿದವು.

₹ 2 ಕೋಟಿವರೆಗಿನ ವೆಚ್ಚದ ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಶೇ 17.15ರಷ್ಟು, ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಶೇ 6.95ರಷ್ಟು, ಹಿಂದುಳಿದ ವರ್ಗಗಳ ಪ್ರವರ್ಗ–1ರ ಪಟ್ಟಿಯಲ್ಲಿರುವ ಜಾತಿಗಳ ಗುತ್ತಿಗೆದಾರರಿಗೆ ಶೇ 4ರಷ್ಟು ಮತ್ತು ಪ್ರವರ್ಗ–2ಎ ಪಟ್ಟಿಯಲ್ಲಿರುವ ಜಾತಿಗಳ ಗುತ್ತಿಗೆದಾರರಿಗೆ ಶೇ 15ರಷ್ಟು ಮೀಸಲಾತಿ ಕಲ್ಪಿಸುವ ತಿದ್ದುಪಡಿಯೂ ಈ ಮಸೂದೆಯಲ್ಲಿದೆ.

₹ 1 ಕೋಟಿವರೆಗಿನ ವೆಚ್ಚದ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ–1, ಪ್ರವರ್ಗ–2ಎ ಮತ್ತು ಪ್ರವರ್ಗ–2ಬಿ ಪಟ್ಟಿಯಲ್ಲಿರುವ ಸಮುದಾಯಗಳ ಗುತ್ತಿಗೆದಾರರಿಗೆ ಮೇಲಿನ ಪ್ರಮಾಣದಲ್ಲೇ ಮೀಸಲಾತಿ ಕಲ್ಪಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.

ಎರಡೂ ಸದನಗಳಲ್ಲಿ ಬಿಜೆಪಿ ಸದಸ್ಯರು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ‘ಹಲಾಲ್‌ ಮಸೂದೆ’ ಎಂದು ಘೋಷಣೆ ಕೂಗಿದರು. ಗದ್ದಲದ ಮಧ್ಯೆಯೇ ಮಸೂದೆಗೆ ಒಪ್ಪಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.