ADVERTISEMENT

ಸ್ಥಳೀಯ ಸಂಸ್ಥೆ: ಮೀಸಲಾತಿ ವಿವಾದ ಅಂತ್ಯಕ್ಕೆ ಆಗ್ರಹ

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 21:29 IST
Last Updated 25 ಸೆಪ್ಟೆಂಬರ್ 2020, 21:29 IST

ಬೆಂಗಳೂರು: ರಾಜ್ಯದ 268 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡೂವರೆ ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕ್ರಮ ಕೈಗೊಳ್ಳದಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳ ಸದಸ್ಯರು ಶುಕ್ರವಾರ ತೀವ್ರ ಅಸಮಾಧಾನ ಹೊರಹಾಕಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಮೀಸಲಾತಿ ವಿವಾದವನ್ನು ಶೀಘ್ರವೇ ಇತ್ಯರ್ಥ ಪಡಿಸುವಂತೆ ಆಗ್ರಹಿಸಿದರು.

ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳೂ ವಾರ್ಡ್‌ ಸಮಿತಿ, ಏರಿಯಾ ಸಮಿತಿಗಳ ರಚನೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಮಸೂದೆ–2020’ರ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ‘ಚುನಾವಣೆ ನಡೆದು ಎರಡೂವರೆ ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಇನ್ನು ಯಾವ ರೀತಿ ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌, ಶ್ರೀನಿವಾಸ ಮಾನೆ, ಎಸ್‌. ರವಿ, ಜೆಡಿಎಸ್‌ನ ಮರಿತಿಬ್ಬೇಗೌಡ, ಅಪ್ಪಾಜಿಗೌಡ ಸೇರಿದಂತೆ ಹಲವರು ಈ ವಿಚಾರದಲ್ಲಿ ಸರ್ಕಾರದ ನಡೆಯನ್ನು ವಿರೋಧಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಇತ್ಯರ್ಥಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂದು ಆಪಾದಿಸಿದರು.

150 ಆಕ್ಷೇಪಣೆ: ‘ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಸಮಿತಿಯ ನಿರ್ಧಾರದಂತೆ ಮಾರ್ಗಸೂಚಿ ರೂಪಿಸಲಾಗಿದೆ. ಅದಕ್ಕೆ 150 ಆಕ್ಷೇಪಣೆಗಳು ಬಂದಿವೆ. ಎಲ್ಲವನ್ನೂ ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ಶೀಘ್ರದಲ್ಲಿ ವಿವಾದ ಇತ್ಯರ್ಥಪಡಿಸಿ, ಚುನಾವಣೆ ನಡೆಸಲಾಗುವುದು’ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಭರವಸೆ ನೀಡಿದರು.

ಪೌರಾಡಳಿತ ಸಚಿವರ ಉತ್ತರದಿಂದ ಪ್ರತಿಪಕ್ಷಗಳ ಸದಸ್ಯರು ತೃಪ್ತರಾಗಲಿಲ್ಲ. ಸಚಿವ ಸಂಪುಟ ಉಪ ಸಮಿತಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಚಿವ ಸುರೇಶ್‌ ಕುಮಾರ್‌ ಕೂಡ ವಿವರಣೆ ನೀಡಿದರು. ‘ಪ್ರಥಮ ಸಭೆ ನಡೆದ ದಿನದಿಂದ ಐದು ವರ್ಷಗಳವರೆಗೆ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಅವಧಿ ಇರುತ್ತದೆ. ವಿಳಂಬದಿಂದ ಅವರ ಅಧಿಕಾರ ಮೊಟಕಾಗುವುದಿಲ್ಲ’ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಚರ್ಚೆಯ ಬಳಿಕ ಮಸೂದೆಗೆ ವಿಧಾನ ಪರಿಷತ್‌ ಒಪ್ಪಿಗೆ ನೀಡಿತು.

ವಾರ್ಡ್‌ ಸಮಿತಿ ರಚನೆ ಸಾಧ್ಯವೆ?
‘ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅದು ಜಾರಿಯೇ ಆಗಿಲ್ಲ. ಇನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಈ ಕೆಲಸ ಸಾಧ್ಯವೆ’ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.