ADVERTISEMENT

ಜಾತಿಗಿಂತ ಆರ್ಥಿಕ ಆಧಾರದಲ್ಲಿ ಮೀಸಲಾತಿ: ಶಾಂತವೀರ ಸ್ವಾಮೀಜಿ ಪ್ರತಿಪಾದನೆ

ರಾಜ್ಯಮಟ್ಟದ ಕುಂಚಿಟಿಗರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 19:31 IST
Last Updated 28 ಫೆಬ್ರುವರಿ 2021, 19:31 IST
ಹೊಸದುರ್ಗದಲ್ಲಿ ಭಾನುವಾರ ನಡೆದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶದಲ್ಲಿ ಕುಂಚಿಟಿಗರ ಕುಲತಿಲಕ ಡಿ.ಬನುಮನಯ್ಯ ಪುತ್ಥಳಿಯನ್ನು ಶಾಂತವೀರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಹೊಸದುರ್ಗದಲ್ಲಿ ಭಾನುವಾರ ನಡೆದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶದಲ್ಲಿ ಕುಂಚಿಟಿಗರ ಕುಲತಿಲಕ ಡಿ.ಬನುಮನಯ್ಯ ಪುತ್ಥಳಿಯನ್ನು ಶಾಂತವೀರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.   

ಹೊಸದುರ್ಗ: ‘ಬಡವರಿಗೆ, ನಿರ್ಗತಿಕರಿಗೆ, ಶೋಷಿತರಿಗೆ ಸಿಗಬೇಕಿದ್ದ ಮೀಸಲಾತಿ ಉಳ್ಳವರಿಗೆ ಸಿಗುವಂತಹ ಪ್ರಯತ್ನಗಳಾದರೆ ಇಲ್ಲದವರು ಯಾರನ್ನು ಮೀಸಲಾತಿ ಕೇಳಬೇಕು? ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮೇಲಕ್ಕೆತ್ತಲು ಸಂವಿಧಾನ ಮೀಸಲಾತಿ ಕಲ್ಪಿಸಿತ್ತು. ಪ್ರಸ್ತುತ ಆರ್ಥಿಕ ಸ್ಥಿತಿ ಆಧಾರದಲ್ಲಿ ಮೀಸಲಾತಿ ಒದಗಿಸಬೇಕೇ ಹೊರತು, ಜಾತಿಆಧಾರದಲ್ಲಿ ಅಲ್ಲ.ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರಲ್ಲಿ ಯಾರು ಬಡವರಿದ್ದಾರೆ ಅವರಿಗೆ ಮೀಸಲಾತಿ ಕೊಡುವುದು ಸಂವಿಧಾನದ ಆಶಯ’ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಪ್ರತಿಪಾದಿಸಿದರು.

ಪಟ್ಟಣದ ಕುಂಚಗಿರಿ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ನಡೆದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ರಾಜ್ಯ ಮಟ್ಟದ ಕುಂಚಿಟಿಗರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಹಲವು ಜಾತಿಯವರು ಮೀಸಲಾತಿ ಕೇಳುವಂತಹ ಸಂದರ್ಭದಲ್ಲಿ ನಾವು ಮೀಸಲಾತಿ ಕೇಳಲು ಹೋದರೆ 10ರಲ್ಲಿ 11 ಆಗುತ್ತೇವೆ ಅಷ್ಟೆ. ಕುಂಚಿಟಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮುಗಿದಿದ್ದು, ಸರ್ಕಾರದ ಬಳಿ ವರದಿ ಇದೆ. ವರದಿಯಲ್ಲಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕುಂಚಿಟಿಗರನ್ನು ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಇದನ್ನು ಅನುಷ್ಠಾನಗೊಳಿಸುವ ಕೆಲಸವನ್ನು ನಮ್ಮ ಮುಖಂಡರು ಅತ್ಯಂತ ಸೂಕ್ಷ್ಮ ಹಾಗೂ ಸಂವೇದನಾಶೀಲತೆಯಿಂದ ಮಾಡಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ಧರಣಿ, ಸತ್ಯಾಗ್ರಹ ಮಾಡಲು ಹೋದರೆ ನ್ಯಾಯಸಿಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಎರಡು ವರ್ಷಗಳಿಂದ ನಾಯಕ ಸಮಾಜ ಹೋರಾಟ ನಡೆಸುತ್ತಿದೆ. ಕುರುಬ ಸಮಾಜದವರು ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ 300 ಕಿ.ಮೀ ಪಾದಯಾತ್ರೆ ನಡೆಸಿದರು. ಈಗ ಪಂಚಮಸಾಲಿ ಸಮುದಾಯ ಕೂಡಹೋರಾಟ ನಡೆಸುತ್ತಿದೆ. ಜಯಂತಿಗಳು, ನಿಗಮ–ಮಂಡಳಿಗಳು ಜಾತಿಯ ಆಧಾರದಲ್ಲಿ ಆಗಿವೆಯೇ ಹೊರತು, ನೀತಿಯ ಮೇಲೆ ಆಗಿಲ್ಲ. ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ. ಪ್ರಜಾಪ್ರಭುತ್ವವು ಜಾತಿಯ ಸಂಕೋಲೆ, ಪ್ರಭಾವಿ ರಾಜಕೀಯ ಮುಖಂಡರ ಕಪಿಮುಷ್ಟಿಯಲ್ಲಿ ಸಿಲುಕಿದೆ. ಹಾವೇರಿ ಜಿಲ್ಲೆಯಲ್ಲಿ ಕುಂಚಿಟಿಗರು ಪ್ರವರ್ಗ–1ರಲ್ಲಿ ಇರುವಂತೆ, ರಾಜ್ಯದ ಇನ್ನಿತರ ಭಾಗದಲ್ಲಿ ನೆಲೆಸಿರುವ ನಮ್ಮ ಜನರನ್ನು ಸಹ ತುರ್ತಾಗಿ ಪ್ರವರ್ಗ–1ಕ್ಕೆಸೇರಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.