ADVERTISEMENT

ಒಳಮೀಸಲಾತಿಗೆ ಉಪ ಸಮಿತಿ ಬೇಡ: ಆಂಜನೇಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 16:28 IST
Last Updated 13 ಆಗಸ್ಟ್ 2025, 16:28 IST
ಎಚ್.ಆಂಜನೇಯ
ಎಚ್.ಆಂಜನೇಯ   

ಬೆಂಗಳೂರು: ‘ಒಳಮೀಸಲಾತಿ ಕುರಿತು ಕೆಲವರು ಅನಗತ್ಯವಾಗಿ ಗೊಂದಲ ಹುಟ್ಟುಹಾಕುತ್ತಿದ್ದಾರೆ. ಇವರ ಒತ್ತಡಕ್ಕೆ ಮನ್ನಣೆ ನೀಡಬಾರದು. ನ್ಯಾ. ನಾಗಮೋಹನದಾಸ್‌ ವರದಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಬಾರದು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಆ.16ರಂದು ಒಳಮೀಸಲಾತಿ ಜಾರಿ ಮಾಡಬೇಕು. ವರದಿ ಜಾರಿ ಮಾಡದೇ ಇದ್ದರೆ ಮಾದಿಗ ಸಮುದಾಯ ಆತಂಕಕ್ಕೆ ಒಳಗಾಗಲಿದೆ. ಇದನ್ನು ಬೇರೆಯವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಪರಿಶಿಷ್ಟ ಜಾತಿ ಗುಂಪಿನಲ್ಲಿ 101 ಜಾತಿಗಳ ಮಧ್ಯೆ ಮೀಸಲಾತಿ ಪಡೆಯಲು ಅಶಕ್ತರಾಗಿರುವ ಮಾದಿಗ ಸಮುದಾಯದವರು ಒಳಮೀಸಲಾತಿ ಜಾರಿ ಹೋರಾಟ ಹುಟ್ಟು ಹಾಕಿದರು. ಈಗ ಮೀಸಲಾತಿ ವರ್ಗೀಕರಣ ಆಗುತ್ತಿರುವ ವೇಳೆ ಅನಗತ್ಯ ಗೊಂದಲವನ್ನುಂಟು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ವೇಳೆ ವಿರೋಧಿಸಿದವರು, ನ್ಯಾ.ನಾಗಮೋಹನದಾಸ್ ಆಯೋಗ ರಚನೆ ವೇಳೆ ಅಪಸ್ವರ ಎತ್ತಿರಲಿಲ್ಲ. ಜಾತಿಗಣತಿ ಸಮೀಕ್ಷೆ ನಡೆಯುವಾಗ ತಮ್ಮ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ಈಗ ನಮ್ಮ ಜಾತಿ ಸಂಖ್ಯೆ ಕಡಿಮೆ ತೋರಿಸಿದ್ದಾರೆ ಎಂದು ಆರೋಪಿಸುತ್ತಿರುವುದು ಸಂವಿಧಾನ ವಿರೋಧಿ ಮಾತುಗಳು ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.