ಬೆಂಗಳೂರು: ‘ಬೌದ್ಧ ಧರ್ಮಕ್ಕೆ ಮತಾಂತರವಾಗಿರುವ ಪರಿಶಿಷ್ಟ ಜಾತಿಗಳ ಜನರಿಗೂ ಮೀಸಲಾತಿ ಮುಂದುವರಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನವಕರ್ನಾಟಕ ನಿರ್ಮಾಣ ಆಂದೋಲನವು ನಗರದಲ್ಲಿ ಶನಿವಾರ ಆಯೋಜಿಸಿದ್ದ, ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಕುರಿತಾದ ದುಂಡುಮೇಜಿನ ಸಭೆಯ ನಂತರ ಅವರು ಮಾತನಾಡಿದರು.
‘ಪರಿಶಿಷ್ಟ ಸಮುದಾಯದ ಹಲವು ಮಂದಿ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಅವರೆಲ್ಲರೂ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು, ಜಾತಿಯ ಕಾಲಂನಲ್ಲಿ ತಮ್ಮ ಮೂಲಜಾತಿಯ ಹೆಸರನ್ನು ಬರೆಯಿಸಲು ತೀರ್ಮಾನಿಸಿದ್ದಾರೆ. ಮತಾಂತರ ಆಗಿದ್ದಾರೆ ಎಂಬುದನ್ನೇ ನೆಪ ಮಾಡಿಕೊಂಡು ಅವರಿಂದ ಮೀಸಲಾತಿಯನ್ನು ಕಸಿದುಕೊಳ್ಳಬಾರದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದರು.
‘ಅಂತಹವರಿಗೆ ಮೀಸಲಾತಿ ಮುಂದುವರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲು, ಸರ್ಕಾರವನ್ನು ಒತ್ತಾಯಿಸಿಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ವಿವರಿಸಿದರು.
ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಸೇರಿದತೆ ವಿವಿಧ ಜಾತಿ ಸಮುದಾಯಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.