ADVERTISEMENT

ಬಿಜೆಪಿ ವಿರುದ್ಧ ಹೋರಾಟ ಗಟ್ಟಿಗೊಳಿಸಲು ನಿರ್ಣಯ: ಸಿಐಟಿಯು ಸಮ್ಮೇಳನಕ್ಕೆ ತೆರೆ

ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 22:41 IST
Last Updated 22 ಜನವರಿ 2023, 22:41 IST
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಿಐಟಿಯು ಕಾರ್ಯಕರ್ತರು ಕೆಂಪು ಟೋಪಿಯೊಂದಿಗೆ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಿಐಟಿಯು ಕಾರ್ಯಕರ್ತರು ಕೆಂಪು ಟೋಪಿಯೊಂದಿಗೆ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಐದು ದಿನಗಳಿಂದ ನಡೆದ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್‌ನ(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಭಾನುವಾರ ತೆರೆ ಕಂಡಿತು. ಬಿಜೆಪಿ ಸರ್ಕಾರಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಲು ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಮ್ಮೇಳನದಲ್ಲಿ ನಿರ್ಧರಿಸಲಾಯಿತು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಹಿರಂಗ ಸಭೆಯಲ್ಲಿ ಸಮ್ಮೇಳನದ ನಿರ್ಣಯಗಳನ್ನು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಘೋಷಿಸಿದರು.

ರೈತ– ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 5 ರಂದು ದೆಹಲಿಯಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಗಾಂಧೀಜಿ ಹುತಾತ್ಮರಾದ ದಿನವಾದ ಜ.30 ರಂದು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಆರ್‌ಎಸ್‌ಎಸ್‌ ಅಣತಿಯಂತೆ ನಡೆಯುತ್ತಿರುವ ಸರ್ಕಾರ, ಧರ್ಮ ರಾಜಕಾರಣ ಮಾಡುತ್ತಿದೆ. ಜನರನ್ನು ಬೀದಿಗೆ ತಳ್ಳಿರುವ ಈ ಸರ್ಕಾರಕ್ಕೆ ಮಾತಿನ ಮೂಲಕ ಹೇಳಿದರೆ ತಿಳಿಯುವುದಿಲ್ಲ. ಹೋರಾಟದ ಮೂಲಕವೇ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ.ಹೇಮಲತಾ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಜನಪರವಾದ ನೀತಿಗಳು ಜಾರಿಯಾಗುತ್ತಿಲ್ಲ. ಬಿಜೆಪಿ ಆಡಳಿತ ನಡೆಸುತ್ತಿರುವ ಎಲ್ಲಾ ರಾಜ್ಯಗಳ ಸ್ಥಿತಿಯೂ ಇದೇ ರೀತಿ ಇದೆ’ ಎಂದು ಹೇಳಿದರು.

ರಾಷ್ಟ್ರೀಯ ಸಮಿತಿಗೆ 41 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಾಗಿ ಕೆ.ಹೇಮಲತಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಪನ್ ಸೇನ್ ಪುನರ್ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಉಪಾಧ್ಯಕ್ಷರಾಗಿ ಎಸ್.ವರಲಕ್ಷ್ಮಿ, ಕಾರ್ಯದರ್ಶಿಗಳಾಗಿ ಮೀನಾಕ್ಷಿ ಸುಂದರಂ, ಕೆ.ಎನ್.ಉಮೇಶ್‌ ಆಯ್ಕೆಯಾಗಿದ್ದಾರೆ.

ಸಮ್ಮೇಳನದ ಕೊನೆಯ ದಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲೆಲ್ಲೂ ಕೆಂಬಾವುಟಗಳು ಹಾರಾಡಿದವು. ಬಹುತೇಕ ಕಾರ್ಯಕರ್ತರು ಕೂಡ ಕೆಂಪು ಟೋಪಿ ಮತ್ತು ಕೆಂಪು ಬಟ್ಟೆ ತೊಟ್ಟು ಭಾಗವಹಿಸಿದ್ದರಿಂದ ಇಡೀ ಮೈದಾನ ಕೆಂಪಾದಂತೆ ಕಂಡಿತು.

‘ವಿಭಜನೆಯ ಸಂಕೇತವಾಗುತ್ತಿರುವ ಕೇಸರಿ’

‘ಕೇಸರಿ ಎಂಬುದು ಒಂದು ಬಣ್ಣ ಮಾತ್ರ. ಆದರೆ, ಅದನ್ನು ವಿಭಜನೆಯ ಸಂಕೇತವಾಗಿ ಮಾಡಲಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.

‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿದ್ದಾರೆ ಎಂಬ ಕಾರಣಕ್ಕೆ ಕಾರ್ಮಿಕರ ವೇತನ ಹೆಚ್ಚಳ ಮಾಡುತ್ತಿಲ್ಲ. ಕಾರ್ಮಿಕರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ’ ಎಂದರು.

‘ಅಧಿಕಾರಕ್ಕೆ ಬರುವ ಮುನ್ನ 2 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿ ರಾಮರಾಜ್ಯ ನಿರ್ಮಾಣದ ಭರವಸೆಗಳನ್ನು ಬಿಜೆಪಿ ನೀಡಿತ್ತು. ಈಗ ರಾವಣ ರಾಜ್ಯವನ್ನಾಗಿ ಪರಿವರ್ತಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.