ADVERTISEMENT

ರೆಸಾರ್ಟ್ ರಾಜಕಾರಣಕ್ಕೆ ಧಿಕ್ಕಾರ: ಚಿಂತಕರ ಪತ್ರ

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗೆ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 19:37 IST
Last Updated 22 ಜನವರಿ 2019, 19:37 IST

ಬೆಂಗಳೂರು: ‘ರೆಸಾರ್ಟ್ ರಾಜಕೀಯದ ಪ್ರಹಸನದಲ್ಲಿ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿವೆ’ ಎಂದು ಚಿಂತಕರಾದ ಕೆ. ಮರುಳಸಿದ್ಧಪ್ಪ, ಬರಗೂರು ರಾಮಚಂದ್ರಪ್ಪ, ಕೆ.ಎಸ್. ವಿಮಲಾ, ಕೆ. ನೀಲಾ ಮತ್ತಿತರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಐವತ್ತಕ್ಕೂ ಹೆಚ್ಚು ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ಸಹಿ ಹಾಕಿದ್ದಾರೆ.

‘ಜನರ ನಿತ್ಯದ ಬದುಕು ಕಷ್ಟಕರ ಆಗಿರುವಾಗ, ಜನರ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಶಾಸಕರು ಮತ್ತು ಅವರ ರಾಜಕೀಯ ನಾಯಕರು ಪರಸ್ಪರ ಮಾರಾಟ ಮತ್ತು ಖರೀದಿಯ ಅಸಹ್ಯಕರ ಕೆಲಸದಲ್ಲಿ ನಿರತರಾಗಿರುವುದು ರಾಜ್ಯ
ಕ್ಕೆ ಅವಮಾನ’ ಎಂದೂ ಟೀಕಿಸಿದ್ದಾರೆ.

ADVERTISEMENT

‘ಸೈದ್ಧಾಂತಿಕ ರಾಜಕಾರಣವನ್ನು ಸಮಯ ಸಾಧಕ ರಾಜಕಾರಣ ಮಾಡಿಕೊಂಡು, ಹಣ,ಅಧಿಕಾರ, ತೋಳ್ಬಲಗಳ ಮೇಲೆ ಆಡಳಿತ ನಡೆಸುತ್ತಿರುವುದು ನಾಚಿಕೆಗೇಡು. ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದಾಗಿ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿ ಶಾಸಕತ್ವ ಸ್ವೀಕರಿಸಿ ಈಗ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದೀರಿ’ ಎಂದೂ ಪಕ್ಷಗಳನ್ನು ಹೀಗಳೆದಿದ್ದಾರೆ.

‘ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿರುವ ಜೆಡಿಎಸ್‌ ಕೂಡ ಸುಭದ್ರ ಆಡಳಿತ ನೀಡುವ ಭರವಸೆ ಮೂಡಿಸಿಲ್ಲ. ಶಾಸಕರಾದ ತಕ್ಷಣ ಮಂತ್ರಿಯಾಗಬೇಕು, ನಿಗಮ ಮಂಡಳಿ ಅಧ್ಯಕ್ಷರಾಗಬೇಕು ಎಂದು ಬೇಡಿಕೆ ಇಡುವುದು ಹೇಸಿಗೆ ಹುಟ್ಟಿಸುತ್ತಿದೆ. ಈ ಬೇಕುಗಳ ಪಟ್ಟಿ ಹಿಡಿದು, ಲಜ್ಜೆ ಬಿಟ್ಟು ಬ್ಲಾಕ್ ಮೇಲ್ ತಂತ್ರಗಳನ್ನು ಹೂಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.