ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ
ಬೆಂಗಳೂರು: ‘ಹೈಕಮಾಂಡ್ ಸೂಚನೆ ಮೇರೆಗೆ ಡಿ.ವಿ. ಸದಾನಂದ ಗೌಡರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನು ಮುಂದೆ ಅವರು ಚುನಾವಣಾ ರಾಜಕೀಯ ತೊರೆದು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ’ ಎಂದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
‘2024ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಸದಾನಂದ ಗೌಡರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ತೆಗೆದುಕೊಂಡರೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡವೆಂದು ವರಿಷ್ಠರು ಅವರಿಗೆ ನೇರವಾಗಿ ಹೇಳಿದ್ದಾರೆ’ ಎಂದರು.
ಹಾಸನದಲ್ಲಿ ಬುಧವಾರ ಮಾತನಾಡಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಸಂದರೂ ಆಗಿರುವ ಡಿ.ವಿ. ಸದಾನಂದ ಗೌಡರು, ‘ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ’ ಎಂದಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಆಹ್ವಾನದ ಮೇರೆಗೆ ಅ. 25ರಂದು ದೆಹಲಿಗೆ ತೆರಳಿದ್ದ ಸದಾನಂದ ಗೌಡರಿಗೆ, ಮೂರು ದಿನ ಕಾದರೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗದೆ ವಾಪಸಾಗಿದ್ದರು. ಅಲ್ಲದೆ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ಆಗಿರುವುದಕ್ಕೆ ಬಹಿರಂಗವಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.