ADVERTISEMENT

ಭೂ ಪರಿವರ್ತನೆಯೇ ಭ್ರಷ್ಟರಿಗೆ ಆದಾಯದ ಮೂಲ: ‘ಸಂದಾಯ’ವಾದರೆ ಸುಲಲಿತ ‘ಕಂದಾಯ’

ಜನರಿಗೆ ಲಂಚಾವತಾರದ ಶೂಲ

ವಿ.ಎಸ್.ಸುಬ್ರಹ್ಮಣ್ಯ
Published 22 ಮೇ 2022, 19:45 IST
Last Updated 22 ಮೇ 2022, 19:45 IST
   

ಬೆಂಗಳೂರು: ಆದಾಯ, ಜಾತಿ ಪ್ರಮಾಣಪತ್ರ, ಪಿಂಚಣಿ, ಜನನ ಮತ್ತು ಮರಣ ನೋಂದಣಿಗೆಲ್ಲ ಸಾವಿರದ ಲೆಕ್ಕ. ಖಾತೆ ಬದಲಾವಣೆ, ಭೂ ಪರಿವರ್ತನೆ, ಪಕ್ಕಾ ಪೋಡಿ, ಜಮೀನು ಮಂಜೂರಾತಿಯಂತಹ ಕೆಲಸಗಳಿಗೆ ಲಕ್ಷದಿಂದ ಕೋಟಿಯವರೆಗೂ ಕೈ ಸುಡುವುದು ಖಚಿತ. ಕೈಬಿಸಿ ಮಾಡದೇ ಇಲ್ಲಿ ಯಾವುದೂ ಆಗುವುದಿಲ್ಲ ಉಚಿತ.... ಇದು ಕಂದಾಯ ಇಲಾಖೆಯ ‘ಕಾಂಚಾಣ ವೈಭವ’.

ಕಂದಾಯ ಇಲಾಖೆಯ ರೆಂಬೆ ಕೊಂಬೆಗಳಂತೆ ಇರುವ ನೋಂದಣಿ ಮತ್ತು ಮುದ್ರಾಂಕ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಗಳ ನರನಾಡಿಗಳಲ್ಲಿಯೂ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದೆ. ಪಿಂಚಣಿಗಾಗಿ ಕಚೇರಿಗೆ ಎಡತಾಕುವ ಬಡಬಗ್ಗರೋ, ಬಡಾವಣೆ, ಅಪಾರ್ಟ್‌ಮೆಂಟ್‌ ನಿರ್ಮಿಸಿ, ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ರಿಯಲ್‌ ಎಸ್ಟೇಟ್‌ ಉದ್ಯಮಿಯೋ ‘ಕಪ್ಪ’ ಸಲ್ಲಿಸದೇ ಕಂದಾಯ ಇಲಾಖೆಯ ಸೇವೆ ಪಡೆಯಲು ಅಸಾಧ್ಯ ಎಂಬ ಮಾತು ರಾಜ್ಯದ ಉದ್ದಗಲಕ್ಕೆ ಕೇಳಿಬರುತ್ತಿದೆ.

ಸಾಮಾಜಿಕ ಪಿಂಚಣಿ ಮಂಜೂರಾತಿ, ಜಾತಿ ಮತ್ತು ಆದಾಯಪ್ರಮಾಣಪತ್ರ ಸೇರಿದಂತೆ ಸಣ್ಣ ಕೆಲಸಗಳಿಗೆ ಗ್ರಾಮ ಲೆಕ್ಕಿಗರಿಂದ ಕಂದಾಯ ನಿರೀಕ್ಷಕರವರೆಗಿನ ಅಧಿಕಾರಿಗಳನ್ನುಚೆನ್ನಾಗಿ ನೋಡಿಕೊಂಡರೆ ಸಾಕು. ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ತಹಶೀಲ್ದಾರರವರೆಗೂ ಈ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲ ತಾಲ್ಲೂಕು ಕಚೇರಿಗಳಲ್ಲೂ ಈ ಕೆಲಸ ಮಾಡುವುದಕ್ಕಾಗಿಯೇ ಮಧ್ಯವರ್ತಿಗಳಿದ್ದಾರೆ. ಅರ್ಜಿಯ ಮೇಲೆ ಸಹಿಹಾಕಿ, ಅವರು ಹೇಳಿದಷ್ಟು ಮೊತ್ತವನ್ನು ಕೈಗಿತ್ತರೆ ಕೆಲಸ ಸಲೀಸು.

ADVERTISEMENT

ಪಕ್ಕಾಪೋಡಿಯೇ ‘ಹುಲ್ಲುಗಾವಲು’: ಪಕ್ಕಾ ಪೋಡಿ ಅರ್ಜಿ ಸಲ್ಲಿಸುವುದು ತೀರಾ ದುಬಾರಿ. ಬೆಂಗಳೂರು ಸೇರಿದಂತೆ ರಿಯಲ್‌ ಎಸ್ಟೇಟ್‌ ಉದ್ಯಮದ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಕ್ಕಾ ಪೋಡಿಗೆ ಅರ್ಜಿ ಸಲ್ಲಿಸುವವರು ಜಮೀನಿನ ಮೌಲ್ಯದ ಒಂದುಭಾಗವನ್ನೇ ಲಂಚಕ್ಕಾಗಿ ತೆಗೆದಿರಿಸಬೇಕಾದ ಸ್ಥಿತಿ ಇದೆ. ಬೆಂಗಳೂರು ಮತ್ತುಸುತ್ತಮುತ್ತ ಪಕ್ಕಾಪೋಡಿ ಪ್ಯಾಕೇಜ್‌ ‘ದರ’ ಪ್ರತಿ ಎಕರೆಗೆ ₹ 50 ಲಕ್ಷದವರೆಗೂ ಇದೆ. ಇತರ ನಗರಗಳು, ಜಿಲ್ಲಾಕೇಂದ್ರಗಳಲ್ಲೂ ಪೋಡಿಗೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು.

‘ಪಕ್ಕಾಪೋಡಿ ಪ್ರಕ್ರಿಯೆ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಹಾಗೂ ಭೂದಾಖಲೆಗಳು ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. ಎಲ್ಲರಿಗೂ ಸೇರಿ ‘ಪ್ಯಾಕೇಜ್‌’ ನಿಗದಿ ಮಾಡುವ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಪ್ರತಿ ತಾಲ್ಲೂಕು, ಜಿಲ್ಲೆ, ನಗರಗಳಿಗೆ ಅನುಗುಣವಾಗಿ ಪ್ಯಾಕೇಜ್‌ ನಿಗದಿಯಾಗಿದೆ’ ಎನ್ನುತ್ತಾರೆ ಅವರು.

ರಾಜ್ಯದಲ್ಲೀಗ ಆರು ಲಕ್ಷಕ್ಕೂ ಹೆಚ್ಚು ಪೋಡಿ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಕೆಲವು ಅರ್ಜಿಗಳು ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. ಜ್ಯೇಷ್ಠತೆ ಆಧಾರದಲ್ಲಿ ಅರ್ಜಿ ವಿಲೇವಾರಿ ಆಗಬಹುದು ಎಂದು ಲಕ್ಷಾಂತರ ಮಂದಿ ಕಾಯುತ್ತಲೇ ಇದ್ದಾರೆ. ಅಧಿಕಾರಿಗಳ ‘ಬೇಡಿಕೆ’ ಪೂರೈಸಿದವರ ಅರ್ಜಿಗಳು ಬೇಗ ಮುಂದಕ್ಕೆ ಸಾಗಿ ಪಕ್ಕಾಪೋಡಿ ಮುಗಿಸಿ, ಹೊಸ ನಕ್ಷೆ ಮತ್ತು ಸರ್ವೆ ಸಂಖ್ಯೆ ಪಡೆಯುತ್ತಿವೆ.

‘ಸರ್ಕಾರದಿಂದ ಮಂಜೂರಾದ ಜಮೀನುಗಳ ಪಕ್ಕಾಪೋಡಿ ಪ್ರಕ್ರಿಯೆ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಪಾಲಿಗೆ ಹುಲ್ಲುಗಾವಲು ಇದ್ದಂತೆ. ನಾಪತ್ತೆಯಾದ ದಾಖಲೆಗಳ ದೃಢೀಕರಣ ಸಮಿತಿ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಎಲ್ಲ ಹಂತಗಳಲ್ಲೂ ‘ಗಂಟು’ ತಲುಪಿಸಿದರಷ್ಟೇ ಪೋಡಿ ಕಡತ ಕೊನೆಯ ಹಂತ ತಲುಪುವುದು’ ಎಂದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ವಿವರಡುತ್ತಾರೆ ಅದೇ ಇಲಾಖೆಯೊಳಗಿರುವ ಅಧಿಕಾರಿಗಳು.

ಭೂ ಪರಿವರ್ತನೆಯಲ್ಲೂ ‘ಸುಗ್ಗಿ’: ವಿವಿಧ ವಲಯಗಳಲ್ಲಿ ಗುರುತಿಸಿರುವ ಜಮೀನುಗಳನ್ನು ಅನ್ಯ ಉದ್ದೇಶಕ್ಕೆ ಬಳಸುವ ಮುನ್ನ ಭೂ ಪರಿವರ್ತನೆ ಆದೇಶ ಕೋರಿ ಅರ್ಜಿ ಸಲ್ಲಿಸುವವರು ದೊಡ್ಡ ಗಾತ್ರದ ಹಣದ ಥೈಲಿ ಹಿಡಿದಿದ್ದರಷ್ಟೇ ಕೆಲಸ ಸಲೀಸು. ಬೆಂಗಳೂರು ಮತ್ತು ಸುತ್ತಮುತ್ತ ಪ್ರತಿ ಎಕರೆಗೆ ಹತ್ತು ಲಕ್ಷಗಳವರೆಗೂ ಕೈ ಬದಲಾವಣೆ ಆದರಷ್ಟೇ ಭೂ ಪರಿವರ್ತನೆ ಆದೇಶ ಪಡೆಯಲು ಸಾಧ್ಯ ಎಂಬ ಸ್ಥಿತಿ ಇದೆ.

ರಾಜ್ಯದ ಎರಡನೇ ಹಂತದ ನಗರಗಳು, ಜಿಲ್ಲಾ ಕೇಂದ್ರಗಳು, ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ತಾಲ್ಲೂಕು ಕೇಂದ್ರಗಳು ಮತ್ತು ಸಣ್ಣ ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ನಿವೇಶನ, ಮನೆಗಳಿಗೆ ಬೇಡಿಕೆ ಹೆಚ್ಚಿದಂತೆ ಭೂ ಪರಿವರ್ತನೆ ಆದೇಶ ಕೋರಿದ ಅರ್ಜಿಗಳೂ ಹೆಚ್ಚುತ್ತಿವೆ. ಎಲ್ಲ ಕಡೆಗಳಲ್ಲೂ ಭೂ ಪರಿವರ್ತನೆ ಆದೇಶಕ್ಕೆ ಎಕರೆ ಲೆಕ್ಕದಲ್ಲಿ ಅಘೋಷಿತ ದರ ಪಟ್ಟಿಗಳಿವೆ ಎಂಬುದನ್ನು ಕಂದಾಯ ಇಲಾಖೆ ವಿವಿಧ ವಿಭಾಗಗಳ ಗೋಡೆ, ಮೇಜು–ಕುರ್ಚಿಗಳೇ ಪಿಸುಗುಡುತ್ತವೆ. ನೇರವಾಗಿಯೋ, ದಲ್ಲಾಳಿಗಳ ಮೂಲಕವೋ ಆದೇಶವನ್ನು ‘ಖರೀದಿ’ ಮಾಡಲೇಬೇಕು.

‘ಭೂ ಪರಿವರ್ತನೆ ಅರ್ಜಿಗಳನ್ನು ಹಣ ನೀಡದೇ ವಿಲೇವಾರಿ ಮಾಡುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಕಂದಾಯ ಇಲಾಖೆಯ ಕಾರ್ಯವೈಖರಿ ಹದಗೆಟ್ಟಿದೆ. ಗ್ರಾಮ ಲೆಕ್ಕಿಗನಿಂದ ಜಿಲ್ಲಾಧಿಕಾರಿಗಳವರೆಗೆ ಎಲ್ಲರೂ ಇದರಲ್ಲಿ ಪಾಲು ಪಡೆಯುತ್ತಿದ್ದಾರೆ. ಹಣ ಕೊಟ್ಟವರಿಗೆ ಯಾವ ಪರಿಶೀಲನೆ, ನಿರ್ಬಂಧಗಳೂ ಇಲ್ಲದೆ ಆದೇಶ ಸಿಗುತ್ತದೆ. ಹಣ ಕೊಡದ ವ್ಯಕ್ತಿ ವರ್ಷಗಟ್ಟಲೆ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಕೆಲಸ ಆಗುವುದಿಲ್ಲ’ ಎನ್ನುತ್ತಾರೆ ಕಂದಾಯ ಇಲಾಖೆಯ ಒಳ–ಹೊರಗನ್ನು ಅಧಿಕೃತವಾಗಿ ತಿಳಿದಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌.

ಕಂದಾಯ ಇಲಾಖೆಯಲ್ಲಿ ಆಯಕಟ್ಟಿನ ಹುದ್ದೆಗಳಿಗೆ ಕೋಟಿಗಟ್ಟಲೆ ರೂಪಾಯಿ ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬರುತ್ತಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ. ಹುದ್ದೆಗೆ ಬರುವುದಕ್ಕೆ ಕೊಟ್ಟ ಮೊತ್ತದ ಹತ್ತರಷ್ಟನ್ನು ಹೋಗುವ ಮುನ್ನ ಜೇಬಿಗಿಳಿಸುವ ಧಾವಂತದಲ್ಲೇ ಇಂಥ ಅಧಿಕಾರಿಗಳು ಇರುತ್ತಾರೆ. ಕೆಲಸ ಚಿಕ್ಕದಿರಲಿ, ದೊಡ್ಡದೇ ಇರಲಿ, ನಿಗದಿಯಾದ ಮೊತ್ತದ ‘ಪ್ಯಾಕೇಜ್’ ತಲುಪದೇ ಇದ್ದರೆ ಕಡತದ ಮೇಲಿನ ‘ಕೆಂಪುಪಟ್ಟಿ’ ಬಿಗಿಯಾಗಿಯೇ ಇರುತ್ತದೆ ಎಂಬ ಮಾತು ಕಂದಾಯ ಇಲಾಖೆಯ ವಿವಿಧ ಕಚೇರಿಗಳ ಬಳಿ ಕಿವಿಗೆ ಅಪ್ಪಳಿಸುತ್ತದೆ.

ನೋಟಿನ ಬದಲಿಗೆ ಜಮೀನಿನಲ್ಲೇ ಪಾಲು!: ನಗರ ಪ್ರದೇಶಗಳಲ್ಲಿ ಜಾನುವಾರುಗಳಿಗಾಗಿ ಕಾಯ್ದಿಟ್ಟ ಸರ್ಕಾರಿ ಗೋಮಾಳವನ್ನು ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌.ಟಿ) ಭೂರಹಿತರಿಗೆ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ‍ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತದ ಹಣ ಕೈ ಬದಲಾಗುತ್ತಿತ್ತು. ಈಗ ಅಧಿಕಾರಿಗಳು ಮಂಜೂರಾದ ಜಮೀನಿನಲ್ಲೇ ಪಾಲು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

‘ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟರ ಹೆಸರಿನಲ್ಲಿ ಜಮೀನು ಮಂಜೂರು ಮಾಡಲಾಗುತ್ತಿದೆ. ಮಂಜೂರಾದ ಜಮೀನಿನಲ್ಲಿ ಒಂದಷ್ಟು ಭಾಗವನ್ನು ಅಧಿಕಾರಿಗಳ ಕಡೆಯವರಿಗೆ ‘ಲಂಚ’ದ ರೂಪದಲ್ಲೇ ವರ್ಗಾಯಿಸುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ’ ಎಂದು ಹೇಳುತ್ತಾರೆ ಸರ್ಕಾರಿ ಜಮೀನುಗಳ ಕಬಳಿಕೆ ಪ್ರಕರಣಗಳ ಕುರಿತು ವಿಚಾರಣೆ ನಡೆಸುತ್ತಿರುವ ವಿಧಾನಸಭೆಯ ಸದನ ಸಮಿತಿ ಸದಸ್ಯರಾಗಿರುವ ಎ.ಟಿ. ರಾಮಸ್ವಾಮಿ.

ನೋಂದಣಿ: ‘ಟೋಕನ್‌’ ಹಾವಳಿ
ಕಂದಾಯ ಇಲಾಖೆಯ ಮತ್ತೊಂದು ಪ್ರಮುಖ ಭಾಗವಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಕಾಂಚಾಣದ ಸದ್ದಿಲ್ಲದೇ ಕೆಲಸ ಆಗುವುದಿಲ್ಲ. ಉಪ ನೋಂದಣಿ ಕಚೇರಿಯೊಳಗೆ ಕಾಲಿಟ್ಟರೆ ಮಧ್ಯವರ್ತಿಗಳ ಮೂಲಕ ‘ಟೋಕನ್‌’ ಖರೀಸದೇ ಕೆಲಸ ಆಗುವುದಿಲ್ಲ ಎಂಬ ಸ್ಥಿತಿ ಇದೆ.

ಖರೀದಿ ಒಪ್ಪಂದ, ಕ್ರಯಪತ್ರ ನೋಂದಣಿಗೆ ಜಮೀನಿನ ಮೌಲ್ಯದ ಶೇಕಡಾವಾರು ‘ಕಾಣಿಕೆ’ ಸಂದಾಯ ಕಡ್ಡಾಯ. ಲಂಚ ಕೊಡಲು ನಿರಾಕರಿಸಿ, ಕಾನೂನು ಪಾಲನೆಗೆ ಆಗ್ರಹಿಸುವ ಜನರ ಕಡತ ವಿಲೇವಾರಿಗೆ ‘ಸರ್ವರ್‌ ಡೌನ್‌’ ಪೆಡಂಭೂತದಂತೆ ಕಾಡುತ್ತದೆ.

‘ಉಪ ನೋಂದಣಿ ಕಚೇರಿಗಳಲ್ಲಿ ಹಣ ಕೊಟ್ಟವರಿಗೆ ಮೊದಲೇ ‘ಟೋಕನ್‌’ಗಳನ್ನು ತಲುಪಿಸಲಾಗುತ್ತದೆ. ಅವರಿಗಾಗಿ ಆದ್ಯತೆಯ ಮೇಲೆ ಕೆಲಸಗಳು ಆಗುತ್ತವೆ. ನಿಯಮದಂತೆ ಕೆಲಸ ಆಗಲಿ ಎಂದು ಬಯಸಿದರೆ ಕಾದು ಕಾದು ಹೈರಾಣಾಗಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಬೇಸತ್ತು ಲಂಚ ಕೊಟ್ಟೇ ಕೆಲಸ ಮಾಡಿಸಬೇಕಾದ ಅನಿವಾರ್ಯತೆಯನ್ನು ಈ ಭ್ರಷ್ಟ ಕೂಟ ನಿರ್ಮಿಸಿದೆ’ ಎನ್ನುತ್ತಾರೆ ನೋಂದಣಿ ಇಲಾಖೆಯ ಕಚೇರಿಗಳಲ್ಲಿ ಲಂಚದ ಹಾವಳಿಯನ್ನು ಕಂಡಿರುವ ನಾಗರಿಕರು. ‘ಕಾಂಚಾಣದ ಕುಣಿತ’ಕ್ಕೆ ತಲೆ ಬಾಗಿ ಯಾರದ್ದೋ ಸ್ವತ್ತನ್ನು ಇನ್ಯಾರಿಗೋ ನೋಂದಣಿ ಮಾಡುವುದು, ನಕಲಿ ದಾಖಲೆಗಳ ಆಧಾರದಲ್ಲಿ ಆಸ್ತಿ ನೋಂದಣಿ, ನ್ಯಾಯಾಲಯಗಳ ಆದೇಶಗಳನ್ನು ಉಲ್ಲಂಘಿಸಿ ನೋಂದಣಿ ಮಾಡುವುದು ಸಲೀಸಾಗಿ ನಡೆದುಹೋಗುತ್ತದೆ.

ಭ್ರಷ್ಟಾಚಾರ ತಡೆಗೆ ಪ್ರಯತ್ನ: ಸಚಿವ ಅಶೋಕ
ಬೆಂಗಳೂರು:
‘ಕಂದಾಯ ಇಲಾಖೆಯಲ್ಲಿ ಭೂ ಮಂಜೂರಾತಿ, ಭೂ ಪರಿವರ್ತನೆ, ಪಕ್ಕಾ ಪೋಡಿ, ವ್ಯಾಜ್ಯಗಳ ವಿಚಾರಣೆ ಮತ್ತಿತರ ಕೆಲಸಗಳಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ಇರುವುದು ನಿಜ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಭ್ರಷ್ಟಾಚಾರ ನಿಗ್ರಹಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

‘ಭೂ ಸುಧಾರಣಾ ಕಾಯ್ದೆಯ ಸೆಕ್ಷನ್‌ 79 ಎ ಮತ್ತು 79 ಬಿ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿತ್ತು. ಆ ಸೆಕ್ಷನ್‌ಗಳನ್ನೇ ರದ್ದು ಮಾಡಿದ್ದೇವೆ. ಪೋಡಿ ಪ್ರಕ್ರಿಯೆಯಲ್ಲಿ ಲಂಚದ ಹಾವಳಿ ತಡೆಗೆ ಸ್ವಯಂ ಪೋಡಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಿಂಚಣಿ ಮಂಜೂರಾತಿಯಲ್ಲೂ ಮಧ್ಯವರ್ತಿಗಳ ಹಾವಳಿ ತಡೆಗೆ ಸಹಾಯವಾಣಿ ಆರಂಭಿಸಲಾಗಿದೆ’ ಎಂದರು. ‘ನೋಂದಣಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯುವುದಕ್ಕೆ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾ ಗುವುದು. ನೋಂದಣಿಯಾದ ಮರುದಿನವೇ ಖಾತೆ ಬದಲಾವಣೆ ಆಗುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇವೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ನನ್ನ ಗುರಿ’ ಎಂದು ಪ್ರತಿಕ್ರಿಯಿಸಿದರು.

ಇಲ್ಲಿ ‘ನ್ಯಾಯ’ವೂ ಮಾರಾಟಕ್ಕಿದೆ!
ಜಮೀನು ಮಂಜೂರಾತಿ, ಭೂ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳ ನೈಜತೆಯನ್ನು ನಿರ್ಣಯಿಸುವ ಅಧಿಕಾರ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಇದೆ. ಬೆಂಗಳೂರು ನಗರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳಿದ್ದರೆ, ಉಳಿದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಈ ಅಧಿಕಾರ ಚಲಾಯಿಸುತ್ತಾರೆ. ಅರೆ ನ್ಯಾಯಿಕ ಅಧಿಕಾರವೂ ಕಂದಾಯ ಇಲಾಖೆಯ ಕಚೇರಿಗಳಲ್ಲಿ ‘ಬಿಕರಿ’ಗೆ ಲಭ್ಯ!

ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಭೂ ದಾಖಲೆಗಳ ನೈಜತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ಈ ಆದೇಶಗಳಿಗೂ ಎಕರೆ ಲೆಕ್ಕದಲ್ಲಿ ದರ ನಿಗದಿಯಾಗುತ್ತದೆ. ಒಂದೇ ಪ್ರಕರಣಕ್ಕೆ ಎರಡು ಆದೇಶಗಳು ಸಿದ್ಧವಾಗಿರುತ್ತವೆ. ಹಣ ಕೊಟ್ಟರೆ ಒಂದು ಆದೇಶ ಹೊರಬರುತ್ತದೆ. ಹಣ ಕೊಡದಿದ್ದರೆ ಇನ್ನೊಂದು ಆದೇಶ ಪ್ರಕಟವಾಗುತ್ತದೆ. ದಲ್ಲಾಳಿಗಳ ಮೂಲಕವೇ ‘ನ್ಯಾಯ’ ಮಾರಾಟವಾಗುತ್ತಿದೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಭೂ ಮಾಲೀಕರ ಪರ ಆದೇಶ ನೀಡಲು ₹ 5 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ವ್ಯವಸ್ಥಾಪಕ ಮತ್ತು ನ್ಯಾಯಾಲಯ ವಿಭಾಗದ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಬಂಧಿಸಿದೆ. ಈ ಪ್ರಕರಣ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ‘ನ್ಯಾಯದ ಮಾರಾಟ’ವನ್ನು ಬಯಲುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.