ADVERTISEMENT

ಅರೆ ನ್ಯಾಯಿಕ ಆದೇಶದಲ್ಲಿ ಸದುದ್ದೇಶ ಇಲ್ಲದಿದ್ದರೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ಹೊಂಗಸಂದ್ರ: ₹100 ಕೋಟಿ ಮೌಲ್ಯದ ಭೂಮಿ ಕಬಳಿಕೆ– ಆರೋಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 23:04 IST
Last Updated 11 ಆಗಸ್ಟ್ 2025, 23:04 IST
   

ಬೆಂಗಳೂರು: ‘ಕಂದಾಯ ಇಲಾಖೆಯಲ್ಲಿ ಅರೆ ನ್ಯಾಯಿಕ ಅಧಿಕಾರ ಇರುವವರು ನೀಡುವ ಆದೇಶಗಳು ಸದುದ್ದೇಶದಿಂದ ಕೂಡಿಲ್ಲ ಎಂಬುದು ಕಂಡು ಬಂದರೆ ಅಂಥವರ ವಿರುದ್ಧವೂ ಶಿಸ್ತು ಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ಎಂ. ಸತೀಶ್‌ ರೆಡ್ಡಿ ಅವರು ಪ್ರಸ್ತಾಪಿಸಿದ್ದ ವಿಚಾರಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ‘ಅರೆನ್ಯಾಯಿಕ ಅಧಿಕಾರ ಇರುವವರು ನೀಡುವ ಆದೇಶವನ್ನು ದೂರುದಾರರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಈವರೆಗೆ ಅವಕಾಶವಿತ್ತು. ಆದರೆ, ಅವರ ಆದೇಶ ಸದುದ್ದೇಶದಿಂದ ಕೂಡಿಲ್ಲ ಎಂಬುದು ಕಂಡುಬಂದರೆ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವ ನಿಟ್ಟಿನಲ್ಲಿ ಈಗಾಗಲೇ ಭೂಸುಧಾರಣೆ ಕಾಯಿದೆಯ ಸೆಕ್ಷನ್‌ 196ಕ್ಕೆ ತಿದ್ದುಪಡಿ ತರಲಾಗಿದೆ’ ಎಂದರು.

₹ 100 ಕೋಟಿ ಮೌಲ್ಯದ ಐದು ಎಕರೆ ಕಬಳಿಕೆ: ‘ಬೊಮ್ಮನಹಳ್ಳಿ ಕ್ಷೇತ್ರದ ಹೊಂಗಸಂದ್ರದ ಗ್ರಾಮ ಸರ್ವೆ ನಂ. 43ರ 2.17 ಎಕರೆ ವಿಸ್ತೀರ್ಣದ ಸ್ಮಶಾನ ಜಾಗಕ್ಕೆ ಹೊಸದಾಗಿ ಪೋಡಿ ಮಾಡಿ ಸರ್ವೆ ನಂ.118ರ ಹೆಸರಿನಲ್ಲಿ ಅಧಿಕಾರಿಗಳು ಶಾಮೀಲಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಬದಲಾಯಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಐದು ಎಕರೆ ಸರ್ಕಾರಿ ಭೂಮಿ ಕಬಳಿಕೆಯಾಗುತ್ತಿದೆ. ಈ ಬಗ್ಗೆ ಹಿಂದೆ ಸದನದಲ್ಲಿ ಪ್ರಸ್ತಾಪಿಸಿದ ನಂತರವೂ ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ನಿವೇಶನ, ಇತರೆ ಪಾಲು ಪಡೆದು ಭೂಕಬಳಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಸತೀಶ್‌ ರೆಡ್ಡಿ ಸದನದ ಗಮನಸೆಳೆದರು.

ADVERTISEMENT

‘ವ್ಯವಸ್ಥಿತ ಭೂಕಬಳಿಕೆ ಪ್ರಕರಣದ ಕಾರಣಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎ.ಸಿ. ವಿರುದ್ಧ ಎಫ್‌ಐಆರ್‌ ದಾಖಲಿಸಲು ಪ್ರಯತ್ನ ನಡೆದಿತ್ತು. ಸದ್ಯಕ್ಕೆ ಅವರನ್ನು ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಶಾಸಕರು ಪ್ರಸಾಪಿಸಿರುವ ಸರ್ವೆ ನಂ.43, 44ಕ್ಕೆ ಸಂಬಂಧಪಟ್ಟಂತೆ 10 ದಿನದೊಳಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗುವುದು. ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಕೆಲವು ಎ.ಸಿ.ಗಳು ನೀಡುವ ಆಯ್ದ ಆದೇಶಗಳು ಆಘಾತ ಉಂಟು ಮಾಡುತ್ತವೆ. ಹೀಗಾಗಿ ಗಮನಕ್ಕೆ ಬಂದ ಪ್ರಕರಣಗಳನ್ನು ತನಿಖೆ ಮಾಡಿಸಲಾಗುತ್ತಿದೆ’ ಎಂದೂ ಹೇಳಿದರು.

‘ಅಧಿಕಾರಿಗಳು ಸೂರ್ಯನಿಗೆ ಟಾರ್ಚ್‌ ಬಿಡ್ತಾರೆ’
‘ಕೆಲವು ಅಧಿಕಾರಿಗಳು ಭೂಮಿ ಮೇಲೆ ಇದ್ದಾರೊ, ಎಲ್ಲಿದ್ದಾರೊ ಗೊತ್ತಾಗುವುದಿಲ್ಲ. ಸೂರ್ಯನಿಗೆ ಟಾರ್ಚ್‌ ಬಿಡ್ತಾರೆ. ಕಪ್ಪನ್ನು ಬಿಳಿ, ಬಿಳಿಯನ್ನು ಕಪ್ಪು ಎಂದು ಮಾಡುತ್ತಾರೆ. ಹೀಗಾಗಿ, ಕಂದಾಯ ಇಲಾಖೆಯಲ್ಲಿ ಅರೆನ್ಯಾಯಿಕ ಅಧಿಕಾರ ಇರುವವರು ನೀಡುವ ಆದೇಶಗಳಲ್ಲಿ ಸದುದ್ದೇಶ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪ್ರಯತ್ನ ಆರಂಭವಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ವಿಭಾಗಾಧಿಕಾರಿ (ಎ.ಸಿ) ವಿರುದ್ಧ ‌ಇಲಾಖಾ ವಿಚಾರಣೆ ನಡೆಯುತ್ತಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.