ಮಂಡ್ಯ: ಹಳ್ಳಿಗಳಲ್ಲಿ ಕಣ್ಮರೆಯಾಗುತ್ತಿರುವ ಗಾಣದ ಎಣ್ಣೆ ತಯಾರಿಕೆಯ ಸಾಂಪ್ರದಾಯಿಕ ಪದ್ಧತಿಗೆ ಮರುಜೀವ ನೀಡಲು ಮತ್ತು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ‘ಎಣ್ಣೆಗಾಣ’ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
2024–25ನೇ ಸಾಲಿನ ಆಯವ್ಯಯದ ಘೋಷಣೆಯ ಪ್ರಕಾರ ತಲಾ ₹1 ಲಕ್ಷ ನೆರವಿನೊಂದಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದ (ಎನ್.ಆರ್.ಎಲ್.ಎಂ) ಸಹಯೋಗದಲ್ಲಿ ಮಹಿಳಾ ಸ್ವ–ಸ್ವಹಾಯ ಸಂಘಗಳ ಸದಸ್ಯರಿಂದ ಗಾಣ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನೆ ರೂಪಿಸಿದ್ದು, ಆಡಳಿತಾತ್ಮಕ ಅನುಮೋದನೆಯೂ ಸಿಕ್ಕಿದೆ.
ಪ್ರತಿ ಪಂಚಾಯಿತಿಯಲ್ಲಿ ಗಾಣಕ್ಕಾಗಿ ಸ್ಥಳ, ಸ್ವ–ಸಹಾಯ ಗುಂಪುಗಳ ಆಯ್ಕೆ, ಬೇಕಾಗಿರುವ ಅನುದಾನ, ಎಣ್ಣೆಕಾಳುಗಳ ಲಭ್ಯತೆಯ ವಿವರಗಳನ್ನು ತುರ್ತಾಗಿ ನೀಡುವಂತೆ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರು (ಅಭಿವೃದ್ಧಿ) ಸೂಚಿಸಿದ್ದಾರೆ.
ನರೇಗಾ ನೆರವು:
ನರೇಗಾ ಯೋಜನೆಯಡಿ ₹17.50 ಲಕ್ಷ ವೆಚ್ಚದಲ್ಲಿ ಪ್ರತಿ ಘಟಕ ಸ್ಥಾಪನೆಗೆ 6X6 ಮೀಟರ್ ವಿಸ್ತೀರ್ಣದ ಮೆಕ್ಯಾನಿಕಲ್ ಕೊಠಡಿ ಮತ್ತು ಶೌಚಾಲಯ ಒಳಗೊಂಡ ‘ವರ್ಕ್‌ಶೆಡ್’ ನಿರ್ಮಾಣ ಮಾಡಿಕೊಡಲಾಗುತ್ತದೆ.
ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಗುರುತಿಸುವ ಸ್ವಸಹಾಯ ಗುಂಪುಗಳ ಸದಸ್ಯರ ಸಹಯೋಗದೊಂದಿಗೆ ಎಣ್ಣೆ ಕಾಳುಗಳು ಹಾಗೂ ಪರಿಕರಗಳ ಸಂಗ್ರಹ, ತರಬೇತಿ, ಮಾರುಕಟ್ಟೆಗಾಗಿ ಪ್ಯಾಕಿಂಗ್, ಲೇಬಲಿಂಗ್‌ಗಾಗಿ ಎನ್.ಆರ್.ಎಲ್.ಎಂ. ಮತ್ತು ಪ್ರಧಾನಮಂತ್ರಿ ಕೇಂದ್ರ ಪಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆ (ಪಿ.ಎಂ.ಎಫ್.ಎಂ.ಇ) ಯೋಜನೆ ಅನುದಾನವನ್ನು ಬಳಸಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ.
171 ಗ್ರಾಮ ಪಂಚಾಯಿತಿಗಳು ಸ್ಥಳವನ್ನು ಗುರುತಿಸಿದ್ದು, 97 ಪಂಚಾಯಿತಿಗಳು ಗಾಣದ ‘ವರ್ಕ್ ಶೆಡ್’ ತಯಾರಿಕೆಗೆ ಕ್ರಿಯಾಯೋಜನೆ ರೂಪಿಸಿವೆ.
‘ಆರೋಗ್ಯಕರ ಮತ್ತು ರಾಸಾಯನಿಕ ಮುಕ್ತವಾಗಿರುವ ಗಾಣದ ಎಣ್ಣೆಯತ್ತ ಜನ ಒಲವು ತೋರುತ್ತಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಕೊಬ್ಬರಿ, ಎಳ್ಳು, ಹುಚ್ಚೆಳ್ಳು, ಹರಳು ಮತ್ತು ಕಡಲೆಕಾಯಿ ಎಣ್ಣೆಗಳನ್ನು ತಯಾರಿಸಬಹುದು. ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿ, ಸ್ವಾವಲಂಬಿ ಜೀವನಕ್ಕೆ ಉತ್ತೇಜನ ನೀಡುತ್ತದೆ’ ಎನ್ನುತ್ತಾರೆ ಮಂಡ್ಯ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ.
ಎಣ್ಣೆಗಾಣ ಸ್ಥಾಪನೆಗೆ ಸ್ಥಳ ಗುರುತಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆಕೆ.ಆರ್.ನಂದಿನಿ, ಸಿಇಒ, ಮಂಡ್ಯ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.