ADVERTISEMENT

ಕ್ರಾಂತಿಯೇ ಸದ್ಯದ ಸಮಸ್ಯೆಗಳಿಗೆ ಪರಿಹಾರ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಮಾತು–ಮಂಥನದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅಭಿಪ್ರಾಯ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಜನವರಿ 2023, 20:13 IST
Last Updated 7 ಜನವರಿ 2023, 20:13 IST
ದೊಡ್ಡರಂಗೇಗೌಡ
ದೊಡ್ಡರಂಗೇಗೌಡ   

ಹಾವೇರಿ (ಕನಕ–ಶರೀಫ–ಸರ್ವಜ್ಞ ಪ್ರಧಾನ ವೇದಿಕೆ): ಗೋಕಾಕ ಚಳವಳಿಯನ್ನೂ ಮೀರಿಸುವಂಥ ಚಳವಳಿ ನಡೆದರೆ ಮಾತ್ರ ಕನ್ನಡ ಉಳಿಯುತ್ತದೆ. ಆದರೆ, ದುರದೃಷ್ಟದಿಂದ ಅಂತಹ ಚಳವಳಿಗಳಿಗೆ ಪೋಷಕರು ದೊರೆಯುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ, ಕವಿ ದೊಡ್ಡರಂಗೇಗೌಡ ವಿಷಾದಿಸಿದರು.

86ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ‘ಅಧ್ಯಕ್ಷರೊಡನೆ ಸಂವಾದ- ಮಾತು ಮಂಥನ’ ಕಾರ್ಯಕ್ರಮದಲ್ಲಿ ಮಾಲತೇಶ ಅಂಗೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವೈಯಕ್ತಿಕ ವಿಷಯಕ್ಕೆ ಹೊರತಾಗಿ ಪ್ರಶ್ನೆಗಳನ್ನು ಕೇಳಿ ಎಂದು ನಿರೂಪಕರು ಮೊದಲೇ ಸೂಚಿಸಿದ್ದರು. ಸಂವಾದದಲ್ಲಿ ಪಾಲ್ಗೊಂಡವರು ಎರಡು ಪ್ರಶ್ನೆಗಳನ್ನು ಚುಟುಕಾಗಿ, ನೇರವಾಗಿ ಗರಿಷ್ಠ ನಾಲ್ಕು ನಿಮಿಷಗಳಲ್ಲಿ ಕೇಳಬೇಕು. ಅಧ್ಯಕ್ಷರ ಉತ್ತರಗಳಿಗೆ ಯಾವುದೇ ಸಮಯಮಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ADVERTISEMENT

ಅಧ್ಯಕ್ಷರು ಕೆಲವು ಪ್ರಶ್ನೆಗಳಿಗೆ ಚುಟುಕಾಗಿಯೇ ಉತ್ತರಿಸಿದರು.

ಸಿನಿಮಾಗೀತೆ ಹಾಗೂ ಭಾವಗೀತೆಗಳ ನಡುವಿನ ವ್ಯತ್ಯಾಸ ಕೇಳಿದಾಗ ಸಂಯೋಜನೆ ಮತ್ತು ಸೃಷ್ಟಿಗಳ ನಡುವೆ, ಸಂಯೋಜನೆಯಲ್ಲಿ ಸಂಗೀತ ಕೈಕಟ್ಟಿಹಾಕುತ್ತದೆ. ಅಲ್ಲಿ ರಾಗ ಸಂಯೋಜನೆಗೆ ಅವಶ್ಯ ಇರುವ ಪದಗಳನ್ನೇ ಬರೆಯಬೇಕಾಗುತ್ತದೆ. ಕಾವ್ಯಸೃಷ್ಟಿಯಲ್ಲಿ ಸ್ವಾತಂತ್ರ್ಯ ಸಿಗುವುದರಿಂದ ಅದರ ಸೌಂದರ್ಯವೇ ಭಿನ್ನವಾಗಿರುತ್ತದೆ ಎಂದು ಹೇಳಿದರು.

'ಜನಪದ ಶೈಲಿಯಲ್ಲಿ ಗ್ರಾಮೀಣ ಸೊಗಡಿನಿಂದಲೇ ಮುನ್ನೆಲೆಗೆ ಬಂದ್ರಿ, ಅದ್ಯಾಕೆ ಗ್ರಾಮೀಣ ಭಾಷೆಯನ್ನು ಆಯ್ಕೆ ಮಾಡಿಕೊಂಡ್ರಿ' ಎಂಬ ಪ್ರಶ್ನೆಗೆ ತುಮಕೂರು ಗ್ರಾಮೀಣ ಭಾಗದ ಭಾಷೆ ಕಾವ್ಯದಲ್ಲಿ ಹಾಸುಹೊಕ್ಕಿದೆ. ನಾವಾಡುವ ಭಾಷೆ ಯಾವತ್ತಿಗೂ ಹೃದಯಕ್ಕೆ ಹತ್ತಿರವಾಗಿರುತ್ತದೆ. ಬದುಕು ಕಂಡಂತೆ ಕಾವ್ಯ ಕಟ್ಟಿದಷ್ಟೂ ಮನಸಿಗಿಳಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ನಿಮ್ಮ ದೀರ್ಘಾಯಸ್ಸು ಹಾಗೂ ಆರೋಗ್ಯದ ಗುಟ್ಟೇನು ಎಂಬ ಪ್ರಶ್ನೆಗೆ, 'ಕವಿಯಾದವನು ತಾನು ಅನುಭವಿಸಿದ್ದೆಲ್ಲವನ್ನೂ ಬರೆಯುತ್ತಾನೆ. ಆನಂದ, ಆತಂಕ, ದುಗುಡ, ದುಃಖ ಎಲ್ಲವನ್ನೂ ಎಲ್ಲಿಯಾದರೂ, ಯಾವುದಾದರೂ ಸ್ವರೂಪದಲ್ಲಿ ಹೊರಹಾಕಿ, ಹಗುರ ಆಗ್ತಾನೆ. ಅದೇ ದೀರ್ಘಾಯುಷ್ಯದ ಗುಟ್ಟು' ಎಂದರು.

ಯಶಸ್ವಿ ಪುರುಷನ ಹಿಂದೆ ಅನ್ನಬಾರದು, ಮುಂದೆ ಒಬ್ಬ ಹೆಣ್ಣುಮಗಳಿದ್ದು, ಪ್ರೇರಣಾದಾಯಕವಾಗಿ ಬದುಕನ್ನು ಮುನ್ನಡೆಸುತ್ತಾಳೆ. ನಿಮ್ಮ ಮಡದಿ ರಾಜೇಶ್ವರಿ ಅವರು ಈ ಪಾತ್ರವನ್ನು ಹೇಗೆ ನಿರ್ವಹಿಸಿದರು ಎಂಬ ಪ್ರಶ್ನೆ ಎದುರಾದಾಗ, ಭಾವುಕರಾದ ದೊಡ್ಡರಂಗೇಗೌಡರು, 'ರಾಜೇಶ್ವರಿ ನನ್ನ ಬದುಕಿನ ಅಸೀಮ ಶಕ್ತಿಯಾಗಿದ್ದರು. ನೀವೇ ಹೇಳಿದಂತೆ ಪ್ರೇರಣಾಶಕ್ತಿಯಾಗಿಯೇ ನನ್ನನ್ನು ಮುನ್ನಡೆಸಿದರು' ಎಂದರು.

ಲೇಖಕ ಕನ್ನಡ ನಾಡಿನಾಚೆಗೂ ಬೆಳೆಯಬೇಕು. ಅವನ ಸಾಹಿತ್ಯ ಎಲ್ಲರಿಗೂ ತಲುಪಬೇಕು. ಅನುವಾದ ಸಾಹಿತ್ಯಕ್ಕೂ ಕವಿಭಾಷೆ ಇದೆ. ಬಹುಭಾಷಾ ಕವಿಗೋಷ್ಠಿಯಲ್ಲಿ ನಾನು ಮಂಡಿಸಿದ ಕವಿತೆಯೊಂದು 18 ಭಾಷೆಗಳಿಗೆ ತರ್ಜುಮೆಗೊಂಡಿದೆ. ಎಲ್ಲೆಗಳನ್ನು ಮೀರಿ ಸಾಹಿತ್ಯ ಬೆಳೆಯಬೇಕು. ಆಗಲೇ ಸಾರ್ಥಕ್ಯ ಮೂಡುತ್ತದೆ. ಲಂಡನ್‌ ಲೈಬ್ರರಿಯಲ್ಲಿ ವಚನ ಸಾಹಿತ್ಯದ ತರ್ಜುಮೆ ನೋಡಿದಾಗ ಅತುಲ್ಯ ಆನಂದ ಉಂಟಾಗಿತ್ತು ಎಂದು ಉಲ್ಲೇಖಿಸಿದರು.

ಆಧುನಿಕ ಕಾಲದ ಬರಹಗಾರ ನಿಂತ ನೀರಾಗಬಾರದು. ಹೊರಗಿನ ಸಂವೇದನೆಗಳಿಗೆ ಸ್ಪಂದಿಸಬೇಕು. ವೈಜ್ಞಾನಿಕ, ತಾಂತ್ರಿಕ ಬದಲಾವಣೆಗಳ ಜೊತೆಗೆ ಬದಲಾಗಬೇಕು. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಅಮೆರಿಕದಲ್ಲಿ 16 ಕನ್ನಡ ಸಂಘಟನೆಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಬೆಳೆಸುವ ಕೆಲಸ ಮಾಡುತ್ತಿವೆ. ಬಹುತೇಕ ವಚನಗಳು ಇಂಗ್ಲಿಷ್‌ಗೆ ತರ್ಜುಮೆಯಾಗಿವೆ. ವಿದೇಶಿಯರು ಕನ್ನಡದ ಕಡೆಗೆ
ಅಭಿಮುಖಗೊಂಡಿದ್ದಾರೆ ಎಂದು ಅವರು ಹೇಳಿದರು.

ಸಾಹಿತ್ಯದಿಂದ ಪ್ರಭುತ್ವದತ್ತ ಪ್ರಶ್ನೆಗಳು ಹೊರಳಿದವು. ಸಂಸದೀಯ ಗುಣಮಟ್ಟ ಈಚೆಗೆ ಕುಸಿಯುತ್ತಿದೆಯೇ ಎಂಬ ಪ್ರಶ್ನೆಗೆ ಒಂದೆರಡು ಕ್ಷಣ ಸುಮ್ಮನಾದ ಅವರು, ಇದಕ್ಕೆ ಉತ್ತರಿಸುವುದು ಚೂರು ಸಂಕೀರ್ಣವಾಗಿದೆ. ಪ್ರಜಾಪ್ರಭುತ್ವ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವಾಗ ಸಂಸದೀಯ ವರ್ತನೆ, ಗುಣಮಟ್ಟ ಎಲ್ಲವೂ ತನ್ನ ಖದರನ್ನು ಕಳೆದುಕೊಳ್ಳುತ್ತಿದೆ. ಸದನದಲ್ಲಿ ಪಂಚೆಕಟ್ಟಿ, ತೊಡೆ ತಟ್ಟಿ ಮಾತನಾಡಿದರೆ ಹೇಗೆ? ಇಂಥದ್ದನ್ನೆಲ್ಲ ಕಂಡಾಗ ಬೇಸರವಾಗುತ್ತದೆ ಎಂದು ವಿಷಾದಿಸಿದರು.

ಪ್ರಾಮಾಣಿಕರ ಕೊರತೆ ಇದೆ. ಹೊಂದಾಣಿಕೆ ಮಾಡಿಕೊಂಡರೆ ಎಲ್ಲವೂ ಸಿಗಲಿದೆ ಎಂಬ ಮನೋಭಾವ ಬೆಳೆಯುತ್ತಿದೆ. ಇದು ಇಡೀ ಲೋಕಕ್ಕೆ ಅಂಟಿಕೊಂಡ ರೋಗವಾಗಿದೆ. ಇದೆಲ್ಲವನ್ನೂ ಸರಿ ಪಡಿಸಬೇಕೆಂದರೆ ಮತ್ತೊಂದು ಕ್ರಾಂತಿ ಆಗಬೇಕಿದೆ ಎಂದರು.

ಮಹಾಬಲಮೂರ್ತಿ ಕೊಡ್ಲಕೆರೆ, ಸಂಕಮ್ಮ ಜಿ. ಸಂಕಣ್ಣನವರ, ಮಾಲತೇಶ ಅಂಗೂರ, ವಿ. ಮನೋಹರ, ಡಾ. ಶೀಲಾದೇವಿ ಎಸ್‌. ಮಳಿಮಠ, ಬಾಪು ಪದ್ಮನಾಭ, ಶಾರದಾ ಮುಳ್ಳೂರು, ಬುಕ್ಕಾಪಟ್ನ ವಾಸು, ರುದ್ರಣ್ಣ ಹರ್ತಿಕೋಟೆ, ಅಂಜನ್‌ ಶೆಟ್ಟಿ ಅವರು ಮಾತು ಮಂಥನದಲ್ಲಿ ಪಾಲ್ಗೊಂಡಿದ್ದರು.

ಹೊಸ ಬರಹಗಾರರಿಗೆ ಕಿವಿಮಾತು

‘ಹೊಸ ಬರಹಗಾರರಿಗೆ ಅಧ್ಯಯನ ಅಂತರಂಗದ ಹಸಿವಾಗಬೇಕು. ಕವಿಯ ಕವಿತೆಗೆ ವಿಶಾಲ ವ್ಯಾಪ್ತಿ ಬರಬೇಕಾದರೆ ಓದು ಹೆಚ್ಚಾಗಬೇಕು’ ಎಂದು ಯುವ ಲೇಖಕರಿಗೆ ಕಿವಿಮಾತು ಹೇಳಿದರು.

ಹೊಸ ಕವಿಗಳು ಹಳೆಯ ಕವಿತೆಗಳನ್ನು ಓದಬೇಕು. ಕುವೆಂಪು, ಬೇಂದ್ರೆ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳಬೇಕು. ಇದರಿಂದ ಭಾಷಾ ಕೋಶ ಬೆಳೆಯುತ್ತದೆ. ನೋಡುವ ನೋಟ, ಅರಿವಿನ ಪರಿಧಿ ವಿಸ್ತಾರವಾಗುತ್ತದೆ. ಕವಿತೆಗೂ ವಿಶಾಲ ವ್ಯಾಪ್ತಿ ಸಿಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.