ADVERTISEMENT

ಆರ್‌ಎಫ್ಒ ವರ್ಗಾವಣೆಯಲ್ಲೂ ಭ್ರಷ್ಟಾಚಾರ: ಕರ್ನಾಟಕ ವಲಯ ಅರಣ್ಯ ಅಧಿಕಾರಿಗಳ ಸಂಘ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:08 IST
Last Updated 22 ಸೆಪ್ಟೆಂಬರ್ 2025, 16:08 IST
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘದ ಪದಾಧಿಕಾರಿಗಳು
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘದ ಪದಾಧಿಕಾರಿಗಳು   

ಬೆಂಗಳೂರು: ‘ವಲಯ ಅರಣ್ಯಾಧಿಕಾರಿಗಳ(ಆರ್‌ಎಫ್‌ಒ) ವರ್ಗಾವಣೆಯಲ್ಲಿ ರಾಜಕೀಯ ಒತ್ತಡ, ವೈಯಕ್ತಿಕ ಶಿಫಾರಸು, ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿವೆ ಎಂಬ ದಟ್ಟ ಭಾವನೆ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿದೆ. ಇವುಗಳ ನಿಯಂತ್ರಣಕ್ಕೆ ಮತ್ತು ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಆರ್‌ಎಫ್‌ಒ ವರ್ಗಾವಣೆಯನ್ನೂ ಕೌನ್ಸೆಲಿಂಗ್‌ ನಿರ್ವಹಣಾ ವ್ಯವಸ್ಥೆಗೆ (ಟಿಸಿಎಂಎಸ್‌)ಒಳಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘ ಒತ್ತಾಯಿಸಿದೆ.

ಸಂಘದ ಪದಾಧಿಕಾರಿಗಳು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಮುಂಚೂಣಿ ಸಿಬ್ಬಂದಿಯ ವರ್ಗಾವಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಮುಂಚೂಣಿ ಸಿಬ್ಬಂದಿ ಎಂದರೆ, ಡಿಆರ್‌ಎಫ್‌ಒ, ಗಾರ್ಡ್‌, ವಾಚರ್ಸ್‌, ಮಾವುತರು– ಕಾವಡಿಗಳು. ಇದನ್ನು ಆರ್‌ಎಫ್‌ಒಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಅರಣ್ಯ ರಕ್ಷಣೆಯಲ್ಲಿ ವಲಯ ವಲಯ ಅರಣ್ಯ ಅಧಿಕಾರಿಗಳ ಪಾತ್ರ ಮಹತ್ವದ್ದು. ಅರಣ್ಯಗಳು ಮತ್ತು ವನ್ಯಜೀವಿ ಧಾಮಗಳ ಸಂರಕ್ಷಣೆಯಲ್ಲಿ ದಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇತರ ಇಲಾಖೆಗಳಂತೆ ಅರಣ್ಯ ಇಲಾಖೆಯಲ್ಲೂ ನಿರ್ದಿಷ್ಟ ಅರಣ್ಯ ವಲಯಗಳಿಗೆ ಹಣ ಕೊಟ್ಟು ಪೋಸ್ಟಿಂಗ್‌ ಪಡೆದುಕೊಳ್ಳುವ ಕೆಟ್ಟ ಪರಂಪರೆ ಆರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದ್ದಾರೆ.

‘ಈ ರೀತಿಯ ವರ್ಗಾವಣೆಗಳಿಂದ ಅರಣ್ಯ ಒತ್ತುವರಿ ತೆರವು, ವನ್ಯಜೀವಿ ಸಂಘರ್ಷ ನಿರ್ವಹಣೆ ಮತ್ತು ಸಾಮಾಜಿಕ ಅರಣ್ಯದಂತಹ ದೀರ್ಘಾವಧಿ ಯೋಜನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಯೋಜನೆಗಳಿಗೆ ಅಧಿಕಾರಿಯ ನಿರಂತರ ಉಪಸ್ಥಿತಿ ಮತ್ತು ಸ್ಥಳೀಯ ಜ್ಞಾನ ಅಗತ್ಯ. ಅನಿಯಂತ್ರಿತ ವರ್ಗಾವಣೆ ಯೋಜನೆಗಳು ಹಳಿ ತಪ್ಪಲು ಕಾರಣ ಆಗಿವೆ. ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ದೂರಿದ್ದಾರೆ.

‘ಕೆಲವು ಇಲಾಖೆಗಳು ವರ್ಗಾವಣೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಅಲ್ಲದೆ, ಹಲವು ರಾಜ್ಯಗಳ ಅರಣ್ಯ ಇಲಾಖೆಗಳೂ ಆನ್‌ಲೈನ್‌ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ವ್ಯವಸ್ಥೆಯನ್ನೂ ಅಳವಡಿಸಿಕೊಂಡಿವೆ. ಹರಿಯಾಣದಲ್ಲಿ ಅಂಕ–ಆಧಾರಿತ ಆನ್‌ಲೈನ್‌ ವರ್ಗಾವಣೆ ನೀತಿ ಜಾರಿಯಲ್ಲಿದೆ. ಅಲ್ಲಿ ಅಧಿಕಾರಿಗಳ ಸೇವಾ ಹಿರಿತನ, ದುರ್ಗಮ ಪ್ರದೇಶಗಳಲ್ಲಿನ ಸೇವೆ ಮತ್ತು ವೈಯಕ್ತಿಕ ಕಾರಣಗಳಿಗೆ ಅಂಕಗಳನ್ನು ನೀಡಿ ಪಾರದರ್ಶಕವಾಗಿ ವರ್ಗಾವಣೆ ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಅಂಶವನ್ನೂ ನಮ್ಮ ರಾಜ್ಯದಲ್ಲೂ ಪರಿಗಣಿಸಬೇಕು’ ಎಂದೂ ಸಲಹೆ ನೀಡಿದೆ.

ಆರ್‌ಎಫ್‌ಒಗಳ ಬೇಡಿಕೆಗಳು

  • ಕೌನ್ಸೆಲಿಂಗ್ ಮೂಲಕ ವರ್ಗಾವಣೆಗಾಗಿ ಆನ್‌ಲೈನ್ ಪೋರ್ಟಲ್‌ ಅಭಿವೃದ್ಧಿಪಡಿಸಬೇಕು. ಈಗ ಇರುವ ಟಿಸಿಎಂಎಸ್‌ ಅನ್ನು ಅಬಕಾರಿ ಇಲಾಖೆಯ ಮಾದರಿಯಲ್ಲಿ ಒಂದು ಸಮಗ್ರ ಆನ್‌ಲೈನ್ ಪೋರ್ಟಲ್‌ ಆಗಿ ಮೇಲ್ದರ್ಜೆಗೇರಿಸಬೇಕು.

  • ಸೇವಾ ಹಿರಿತನ ದುರ್ಗಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿನ ಸೇವೆ ಕಾರ್ಯಕ್ಷಮತೆ ಮೌಲ್ಯ ಮಾಪನ ವಿಶೇಷ ಸಾಧನೆಗಳು ಪತಿ–ಪತ್ನಿ ಪ್ರಕರಣಗಳು ಗಂಭೀರ ಅನಾರೋಗ್ಯ ಮತ್ತು ಮಕ್ಕಳ ಶಿಕ್ಷಣದಂತಹ ವಿಷಯಗಳಿಗೆ ನಿರ್ದಿಷ್ಟ ಅಂಕ ನೀಡುವ ಅಂಕ–ಆಧಾರಿತ ಮಾನದಂಡವನ್ನೂ ಅಳವಡಿಸಬೇಕು.

  • ವರ್ಗಾವಣೆಗೆ ಅರ್ಹರಾದ ಅಧಿಕಾರಿಗಳ ಪಟ್ಟಿ ಅವರು ಗಳಿಸಿದ ಅಂಕಗಳು ಮತ್ತು ಅಂತಿಮ ವರ್ಗಾವಣೆ ಆದೇಶಗಳನ್ನು ಸಾರ್ವಜನಿಕವಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇದರಿಂದ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.