ADVERTISEMENT

ಡ್ರಗ್ಸ್ ಜಾಲ: ಮಾಜಿ ಸಚಿವ ಲಮಾಣಿ ಪುತ್ರ ಬಂಧನ

ಆರೋಪಿಗಳಿಗೆ ಆಶ್ರಯ ಕೊಟ್ಟ ಆರೋಪ: ಗೋವಾದಲ್ಲಿ ಮೂವರನ್ನು ಬಂಧಿಸಿದ ಸಿಸಿಬಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 20:19 IST
Last Updated 9 ನವೆಂಬರ್ 2020, 20:19 IST
ದರ್ಶನ್
ದರ್ಶನ್   

ಬೆಂಗಳೂರು: ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ತರಿಸಿಕೊಂಡು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಮಾಜಿ ಸಚಿವ,ಕಾಂಗ್ರೆಸ್‌ ಮುಖಂಡರೂ ಆದ ಹಾವೇರಿಯ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಅವರನ್ನು ಸಿಸಿಬಿ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

‘ಅಂಚೆ ಮೂಲಕ ಡ್ರಗ್ಸ್ ತರಿಸುತ್ತಿದ್ದ ಆರೋಪಿ ಸುಜಯ್ ಎಂಬಾತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಆತನಿಂದ 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಲಾಗಿತ್ತು. ಸುಜಯ್ ಜೊತೆ ಕೃತ್ಯ ಎಸಗುತ್ತಿದ್ದ ಹೇಮಂತ್‌ ಹಾಗೂ ಸುನೇಶ್‌ ಎಂಬುವರು ತಲೆಮರೆಸಿಕೊಂಡಿದ್ದರು. ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿತ್ತು’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಆರೋಪಿಗಳಾದ ಹೇಮಂತ್ ಹಾಗೂ ಸುನೇಶ್, ಗೋವಾದಲ್ಲಿ ಇರುವ ಮಾಹಿತಿ ಲಭ್ಯವಾಗಿತ್ತು. ಗೋವಾಕ್ಕೆ ಹೋಗಿದ್ದ ತಂಡ, ಅವರಿಬ್ಬರನ್ನು ಬಂಧಿಸಿದೆ. ಜೊತೆಗೆ, ಅವರಿಬ್ಬರಿಗೆ ಗೋವಾದಲ್ಲಿ ಆಶ್ರಯ ನೀಡಿದ್ದರೆನ್ನಲಾದ ದರ್ಶನ್ ಲಮಾಣಿ ಅವರನ್ನೂ ಸೆರೆ ಹಿಡಿದು ಬೆಂಗಳೂರಿಗೆ ಕರೆತರಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಮೂವರನ್ನೂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿ, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಡ್ರಗ್ಸ್ ಮಾರಾಟ ಪ್ರಕರಣದ ಆರೋಪಿಗಳಿಗೂ ದರ್ಶನ್ ಅವರಿಗೂ ಇರುವ ಸಂಬಂಧವೇನು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದೂ ಹೇಳಿದರು.

ವ್ಯವಸ್ಥಿತ ಜಾಲ: ‘ಸುಜಯ್ ಹಾಗೂ ಇತರೆ ಆರೋಪಿಗಳು, ಮೂರ್ನಾಲ್ಕು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ ಮಾಹಿತಿ ಇದೆ. ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಆರೋಪಿಗಳು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.