ADVERTISEMENT

ಉಂಗುರ ಉಡುಗೊರೆ

ಎಂ.ಟಿ.ಬಿ ನಾಗರಾಜ್‌ ವಿರುದ್ಧ ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:41 IST
Last Updated 1 ಡಿಸೆಂಬರ್ 2019, 13:41 IST
   

ಬೆಂಗಳೂರು:‘ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಅವರು ಮತದಾರರಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದ್ದರೆ, ‘ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರು ಬೆಳ್ಳಿ ಲೋಟ ವಿತರಣೆ ಮಾಡುತ್ತಿದ್ದಾರೆ’ ಎಂದು ಎಂ.ಟಿ.ಬಿ.ನಾಗರಾಜ್ ಸಹ ಆಪಾದಿಸಿದ್ದಾರೆ.

ಈ ಸಂಬಂಧ ಮುಖ್ಯ ಚುನಾವಣಾಧಿಕಾರಿಗೆ ಮಂಗಳವಾರ ದೂರು ನೀಡಿರುವ ಕಾಂಗ್ರೆಸ್ ಮುಖಂಡರು, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರಿಗೆ ಆಮಿಷ ಒಡ್ಡಿರುವ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ‘ಉಂಗುರ ಸೇರಿದಂತೆ ದುಬಾರಿ ಬೆಲೆಯ ವಸ್ತುಗಳನ್ನು ನೀಡುವ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸಿಂಗ್ ವಿರುದ್ಧವೂ ದೂರು: ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧವೂ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ADVERTISEMENT

ಆನಂದ್ ಸಿಂಗ್ ತಮ್ಮ ಮನೆಯ ಗೃಹ ಪ್ರವೇಶ ಮಾಡಿದ್ದು, ಈ ಕಾರ್ಯಕ್ರಮಕ್ಕೆ ಬಂದವರಿಗೆಲ್ಲ ದುಬಾರಿ ಬೆಲೆಯ ಉಡುಗೊರೆ ಕೊಟ್ಟಿದ್ದಾರೆ. ಡಿ.1ರಂದು ಸಿಂಗ್ ಅವರ ಮಗನ ಮದುವೆ ನಿಗದಿಯಾಗಿದ್ದು, ನಾಲ್ಕೈದು ಬೃಹತ್ ಪೆಂಡಾಲ್ ಹಾಕಿಸಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇವೆಲ್ಲ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಪಾದಿಸಿದೆ.

‘ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲುನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಕ್ರಮಕೈಗೊಳ್ಳುವಭರವಸೆ ನೀಡಿದ್ದಾರೆ. ಯಾವ ರೀತಿಯಲ್ಲಿ ಚುನಾವಣಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ಮುಂದಿನ ಹೋರಾಟ
ನಿರ್ಧರಿಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.