ADVERTISEMENT

ನದಿಗಳಲ್ಲಿ ಹರಿವು ಹೆಚ್ಚಳ, ವಿವಿಧೆಡೆ ಬೆಳೆ ಜಲಾವೃತ

ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತ l 30ರವರೆಗೆ ಕೊಲ್ಲೂರು ಘಾಟಿ ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 19:49 IST
Last Updated 18 ಜೂನ್ 2021, 19:49 IST
ಮಳೆ ಮತ್ತು ಬಳ್ಳಾರಿ ನಾಲಾ ಪ್ರವಾಹದಿಂದಾಗಿ ಬೆಳಗಾವಿ ತಾಲ್ಲೂಕಿನ ಯಳ್ಳೂರ ಬಳಿ ನೂರಾರು ಎಕರೆ ಭತ್ತದ ಬೆಳೆ ಮುಳುಗಿದೆ – ಪ್ರಜಾವಾಣಿ ಚಿತ್ರ/ಏಕನಾಥ ಅಗಸಿಮನಿ (ಎಡಚಿತ್ರ) ಸತತ ಮಳೆಯಿಂದ, ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದ ಸ್ನಾನಘಟ್ಟವು ಜಲಾವೃತಗೊಂಡಿದೆ
ಮಳೆ ಮತ್ತು ಬಳ್ಳಾರಿ ನಾಲಾ ಪ್ರವಾಹದಿಂದಾಗಿ ಬೆಳಗಾವಿ ತಾಲ್ಲೂಕಿನ ಯಳ್ಳೂರ ಬಳಿ ನೂರಾರು ಎಕರೆ ಭತ್ತದ ಬೆಳೆ ಮುಳುಗಿದೆ – ಪ್ರಜಾವಾಣಿ ಚಿತ್ರ/ಏಕನಾಥ ಅಗಸಿಮನಿ (ಎಡಚಿತ್ರ) ಸತತ ಮಳೆಯಿಂದ, ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದ ಸ್ನಾನಘಟ್ಟವು ಜಲಾವೃತಗೊಂಡಿದೆ   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಇನ್ನಷ್ಟು ಚುರುಕಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತೀವ್ರಗೊಂಡಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಆರ್ಭಟ ತುಸು ತಗ್ಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದೆ. ತಲಕಾವೇರಿ, ನಾಪೋಕ್ಲು, ಕಕ್ಕಬ್ಬೆ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದೆ. ಭಾಗಮಂಡಲ –ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದೆ. ಬೇತು ಗ್ರಾಮದ ಬಳಿ ನಾಪೋಕ್ಲು– ಬಲಮುರಿ ಸಂಪರ್ಕ ರಸ್ತೆ ಜಲಾವೃತಗೊಂಡಿದೆ.

ಬಾಳೆಲೆ, ನಿಟ್ಟೂರು ಭಾಗದಲ್ಲಿ ಭತ್ತದ ಗದ್ದೆಗಳು ಲಕ್ಷ್ಮಣತೀರ್ಥ ನದಿಯ ಪ್ರವಾಹದಲ್ಲಿ ಮುಳುಗಡೆಯಾಗಿವೆ. ಪ್ರಮುಖ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯತ್ತಿವೆ. ಹಾರಂಗಿ ಜಲಾಶಯ ಒಳಹರಿವು ಏರಿಕೆಯಾಗಿದೆ.

ADVERTISEMENT

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮರಗಳು ನೆಲಕ್ಕುರುಳಿವೆ. ಹೆತ್ತೂರು ಭಾಗದಲ್ಲಿ ಅಲ್ಪಪ್ರಮಾಣದ ಭೂಕುಸಿತ ಉಂಟಾಗಿದ್ದು, ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕಾಫಿ ತೋಟದ ಕಾರ್ಮಿಕರಿಗೆ ರಜೆ ನೀಡಲಾಗಿದೆ.

ಕರಾವಳಿ, ಚಿಕ್ಕಮಗಳೂರು: ತಗ್ಗಿದ ಮಳೆ– ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಹಲವೆಡೆ ಭೂಕುಸಿತದಿಂದ ಮಣ್ಣು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿ, ಮಳೆಯಿಂದಾಗಿ ಒಟ್ಟು 17 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 5.4 ಸೆಂ.ಮೀ ಮಳೆಯಾಗಿದೆ. ₹ 8.67 ಲಕ್ಷ ಹಾನಿ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ನೆಲ್ಲಿಬೀಡು ಗ್ರಾಮದ ಬಸ್‌ ತಂಗುದಾಣ, ಬಣಕಲ್‌ನಲ್ಲಿ ಶಾಲಾ ಕಟ್ಟಡದ ಮೇಲೆ ಮರ ಉರುಳಿ ಚಾವಣಿಗೆ ಹಾನಿಯಾಗಿದೆ. ಕಳಸ – ಕುದುರೆಮುಖ ಮಾರ್ಗದಲ್ಲಿ ಬಿಳಗೋಡು ಬಳಿ ಮಣ್ಣು ರಸ್ತೆಗೆ ಕುಸಿದು, ಸಂಚಾರಕ್ಕೆ ಅಡಚಣೆಯಾಗಿತ್ತು.

ಘಾಟಿ ಸಂಚಾರ ಬಂದ್‌: ಶಿವಮೊಗ್ಗ ಜಿಲ್ಲೆಯ ಹೊಸನಗರದ ನಗರ, ತೀರ್ಥಹಳ್ಳಿಯ ಆಗುಂಬೆ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.

ಹೊಸನಗರ ತಾಲ್ಲೂಕು ನಾಗೋಡಿ ಬಳಿ ರಸ್ತೆ ಕುಸಿದಿದ್ದು, ತ್ವರಿತ ಕಾಮಗಾರಿ ಕೈಗೊಳ್ಳಲು ಅನುವಾಗುವಂತೆ ಆ.30ರವರೆಗೆ ಕೊಲ್ಲೂರು ಘಾಟಿ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಶೃಂಗೇರಿ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾ ಜಲಾಶಯಕ್ಕೆ 31,277 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. ತೀರ್ಥಹಳ್ಳಿ ರಾಮಮಂಟಪ ಮುಳುಗುವ ಹಂತದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಭದ್ರಾ ಜಲಾಶಯದ ಮಟ್ಟ 2.6 ಅಡಿ ಹಾಗೂ ಲಿಂಗನಮಕ್ಕಿ ಜಲಾಶಯದ ಮಟ್ಟ 2.20 ಅಡಿ ಏರಿದೆ.

ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿ ನೀರಿನ ಹರಿವಿನ ಪ್ರಮಾಣ ಏರಿದೆ. ಸುಕ್ಷೇತ್ರ ಕರಿಬಸವೇಶ್ವರ ಗದ್ದುಗೆಯ ಸ್ನಾನಘಟ್ಟ ಮುಳುಗಡೆಯಾಗಿದೆ.

ತುಂಬಿದ ಬೆಣ್ಣಿಹಳ್ಳ: ಧಾರವಾಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಹುಬ್ಬಳ್ಳಿಯಲ್ಲೂ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ. ನವಲಗುಂದದ ಬೆಣ್ಣಿಹಳ್ಳ ಮೈದುಂಬಿ ಹರಿಯುತ್ತಿದೆ. ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ಭಾಗದಲ್ಲಿ ಆಗಾಗ ಮಳೆಯಾಗಿದೆ. ಜಲಾವೃತಗೊಂಡಿದ್ದ ಕಿರು ಸೇತುವೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಮಲೆನಾಡಿನ ವಿವಿಧೆಡೆ ಮಳೆಯಿಂದ ಹಾನಿ ಮುಂದುವರಿದಿದೆ. ಯಲ್ಲಾಪುರ ಪಟ್ಟಣದಲ್ಲಿ ಮನೆಯ ಚಾವಣಿ ಕುಸಿದು ಮನೆ ಮಾಲೀಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿರಸಿ ತಾಲ್ಲೂಕಿನ ಇಳಿಸರದಲ್ಲಿ ವಿದ್ಯುತ್ ತಂತಿ ತುಳಿದು ಎರಡು ಎತ್ತುಗಳು, ಒಂದು ಆಕಳು ಮೃತಪಟ್ಟಿವೆ. ಮುಂಡಗೋಡದಲ್ಲಿ ಮಳೆ ಜೋರಾಗಿತ್ತು.

ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಯಿತು. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.