(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮೋಟಾರು ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆಗೆ ಭಾರತ ಸರ್ಕಾರದ ಯೋಜನೆ (CTRAV) 2025ರ ಅಡಿಯಲ್ಲಿ ನೀಡುವ ₹ 1.5 ಲಕ್ಷ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿಯಾಗಿ ₹1 ಲಕ್ಷ ನೆರವು ಒದಗಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಪಘಾತ ಸಂತ್ರಸ್ತರ ಯೋಜನೆಯನ್ನು ಮಾರ್ಪಡಿಸಿ ಪ್ರತಿ ಅಪಘಾತ ಸಂತ್ರಸ್ತರಿಗೆ ₹1.5 ಲಕ್ಷಗಳ ವರೆಗಿನ ಚಿಕಿತ್ಸೆ ಒದಗಿಸುವ ಭಾರತ ಸರ್ಕಾರದ ನಗದು ರಹಿತ ಚಿಕಿತ್ಸೆ(CTRAV) ಯೋಜನೆ 2025ಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ₹1 ಲಕ್ಷ (Top up) ಒದಗಿಸುವ ಸಂಬಂಧ ಈ ಕೆಳಕಂಡಂತೆ ಜಾರಿಗೊಳಿಸಲು ಅನುಮೋದನೆ ನೀಡಿ ಆದೇಶಿಸಿದೆ.
ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳು ಹಾಗೂ ಬಹು ಅಂಗಾಂಗ ವೈಫಲ್ಯ ಅಥವಾ ಇತರ ಗಂಭೀರ ಚಿಕಿತ್ಸೆಗೆ ಒಳಪಟ್ಟವರು ನಗದು ರಹಿತ ಚಿಕಿತ್ಸೆ ಯೋಜನೆಯ 7 ದಿನಗಳ ಚಿಕಿತ್ಸೆ ನಂತರವೂ ರಾಜ್ಯ ಪ್ಯಾಕೇಜ್ ಪ್ರಕಾರ ವಿಸ್ತ್ರತ ಚಿಕಿತ್ಸೆಗೆ ಒಳಗಾದಲ್ಲಿ ಅವರಿಗೆ ಹೆಚ್ಚುವರಿ ₹1 ಲಕ್ಷದ ಟಾಪ್-ಅಪ್ ಒದಗಿಸತಕ್ಕದ್ದು.
ರೋಗಿಗೆ ನೊಂದಾಯಿತವಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ, ಆ ಆಸ್ಪತ್ರೆ ಎನ್‌ಎಬಿಎಚ್, ಎನ್‌ಕ್ಯೂಎಎಸ್ ಮಾನ್ಯತೆ ಪಡೆದಿರಬೇಕು ಅಥವಾ ರಾಜ್ಯದ ನೊಂದಾವಣೆ ಮಾನದಂಡಗಳನ್ನು ಪೂರೈಸಿರಬೇಕು. ಈ ಸಂದರ್ಭದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(SAST) ಪ್ಯಾಕೇಜ್ ದರಗಳಲ್ಲಿ ₹ 1 ಲಕ್ಷದ ಮಿತಿಗೆ ಒಳಪಟ್ಟಿರತಕ್ಕದ್ದು.
(ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ) AB-Ark ನೊಂದಾಯಿತವಲ್ಲದ ಆಸ್ಪತ್ರೆಗಳಲ್ಲಿ ವೈದ್ಯಕೀಯವಾಗಿ ನ್ಯಾಯಸಮ್ಮತವಾದಲ್ಲಿ, 7 ದಿನಗಳ ನಂತರವೂ ಚಿಕಿತ್ಸೆಯನ್ನು ಮುಂದುವರಿಸಲು ಅವಕಾಶ ನೀಡುವುದು.
ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ₹1.5 ಲಕ್ಷವನ್ನು ಮೀರಿದ ಅನಿರ್ದಿಷ್ಟ (unspecified) ಚಿಕಿತ್ಸಾ ವಿಧಾನಗಳಿಗೆ ವೈದ್ಯಕೀಯ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ರಾಜ್ಯದ ಸಹಾಯಧನವನ್ನು ನೀಡುವುದು.
ಈ ಯೋಜನೆಯನ್ನು ಯಾವುದೇ ಹೆಚ್ಚವರಿ ಆರ್ಥಿಕ ಹೊರೆಯಿಲ್ಲದೆ ಅಸ್ತಿತ್ವದಲ್ಲಿರುವ ರಾಜ್ಯ ಬಜೆಟ್‌ನಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೆ ಅನುಷ್ಠಾನಗೊಳಿಸತಕ್ಕದ್ದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ರಸ್ತೆ ಅಪಘಾತದ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮೊದಲು 2024ರ ಮಾರ್ಚ್‌ನಲ್ಲಿ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ನಂತರ ಅದನ್ನು ಆರು ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಈಗ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.