ನವದೆಹಲಿ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ಹೆಸರು ಬದಲಿಸಿ ಜಿಲ್ಲೆಯ ರಸ್ತೆಗಳಿಗೆ ಚಿನ್ನದ ತಗಡು ಹಾಕುತ್ತಾರಾ’ ಎಂದು ಪ್ರಶ್ನಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ. ಮುಂದೆ ಪರಿಸ್ಥಿತಿ ಬದಲಾಗಲಿದೆ. ಆಗ ಇವರು ಇಟ್ಟಿರುವ ಹೆಸರೂ ಬದಲಾಗಲಿದೆ’ ಎಂದರು.
‘ಈ ರಾಜ್ಯಕ್ಕೆ ರಾಮನಗರ ಜಿಲ್ಲೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಕಟ್ಟಿಸಿದ್ದರು. ನೆಹರೂ ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದರೆ ಅಭಿನಂದಿಸುತ್ತಿದ್ದೆ’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಭೂಮಿಗಳ ಬೆಲೆ ಏರಿಸುವ ಷಡ್ಯಂತ್ರದ ಭಾಗವಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ’ ಎಂದರು.
‘ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತದೆ ಎನ್ನವುದು ಅವರಿಗೆ ಗೊತ್ತಿದೆ. ಮಧ್ಯರಾತ್ರಿ ಒಂದು ಗಂಟೆಯ ವರೆಗೆ ವ್ಯಾಪಾರ ಮಾಡುತ್ತಿರುವವರು ಯಾರು. ಅವರ ಎಲ್ಲ ಹಣೆಬರಹ ನನಗೆ ಗೊತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.