ADVERTISEMENT

ರೋಲ್ಕಾಲ್, ರೌಡಿ ಸರ್ಕಾರ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

40% ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿದೆ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2022, 8:56 IST
Last Updated 12 ಡಿಸೆಂಬರ್ 2022, 8:56 IST
   

ಬೆಂಗಳೂರು: ಹೊಯ್ಸಳ ಗಸ್ತು ಸಿಬ್ಬಂದಿಗಳು ದಂಪತಿಯಿಂದ ₹1000 ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ, ರಾಜ್ಯ ಕಾಂಗ್ರೆಸ್ ಘಟಕ, ಸರ್ಕಾರದ ವಿರುದ್ಧ ಕಿಡಿಕಾರಿದೆ.

‘ರೋಲ್ಕಾಲ್‌ ರೌಡಿ ಬಿಜೆಪಿ ಸರ್ಕಾರದಲ್ಲಿ ಸಾಮಾನ್ಯರ ರಕ್ಷಣೆ ಮಾಡುವವರು ಯಾರು?‘ ಎಂದು ಪ್ರಶ್ನೆ ಮಾಡಿದೆ.

‘ದಂಪತಿಯಿಂದ ₹1 ಸಾವಿರ ಸುಲಿಗೆ ಮಾಡಿದ್ದ ಹೊಯ್ಸಳದ ಗಸ್ತು ಸಿಬ್ಬಂದಿಗಳು ಅಮಾನತು‘ ಎನ್ನುವ ಶೀರ್ಷಿಕೆಯಡಿ ‘ಪ್ರಜಾವಾಣಿ‘ ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

‘ಬೆಂಗಳೂರಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನತೆಗೆ ರಕ್ಷಣೆ ನೀಡಬೇಕಾದ ಪೋಲಿಸರು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ಅಮಾಯಕ ದಂಪತಿಗಳಿಗೆ ಬೆದರಿಸಿ ಥೇಟ್ ದರೋಡೆಕೋರರಂತೆ ವರ್ತಿಸಿ ಹಣ ವಸೂಲಿ ಮಾಡಿರುವುದು ವರದಿಯಾಗಿದೆ. ಬಹುಶಃ ರಾಜ್ಯ ರೋಲ್ಕಾಲ್ ಸರ್ಕಾರದ ಪೊಲೀಸ್ ವ್ಯವಸ್ಥೆಯ ಇಂದಿನ ಪರಿಸ್ಥಿತಿ ಅರಿಯಲು ಈ ಒಂದು ಘಟನೆ ಸಾಕಾಗಿದೆ‘ ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

‘ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ-ಕೋಟಿಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು ಅಕ್ಷರಶಃ ದರೋಡೆಕೋರರಂತೆ ಜನರ ಲೂಟಿಗೆ ಇಳಿದಿದ್ದಾರೆ.‌ 40% ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲ ಕಳೆಯುತ್ತಿದೆ‘ ಎಂದು ಕಾಂಗ್ರೆಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.