ADVERTISEMENT

ಮಾಜಿ ರೌಡಿ ನಿಧನ; ಎಸ್‌.ಪಿ ರಸ್ತೆ ಬಂದ್‌

* ಸುಬ್ರಮಣಿ ಭಾವಚಿತ್ರದ ಬ್ಯಾನರ್ ಅಳವಡಿಕೆ * ಸ್ವಯಂಪ್ರೇರಿತ ನಿರ್ಧಾರವೆಂದ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 5:23 IST
Last Updated 6 ಜುಲೈ 2019, 5:23 IST
ಎಸ್‌.ಪಿ. ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ಕೆ. ಸುಬ್ರಮಣಿ ಅವರ ಭಾವಚಿತ್ರವಿದ್ದ ಬ್ಯಾನರ್. ಅದರ ಸಮೀಪದಲ್ಲೇ ಬಂದ್ ಆಗಿದ್ದ ಅಂಗಡಿ ಎದುರು ಕುಳಿತಿದ್ದ ಕೆಲಸಗಾರರು  
ಎಸ್‌.ಪಿ. ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ಕೆ. ಸುಬ್ರಮಣಿ ಅವರ ಭಾವಚಿತ್ರವಿದ್ದ ಬ್ಯಾನರ್. ಅದರ ಸಮೀಪದಲ್ಲೇ ಬಂದ್ ಆಗಿದ್ದ ಅಂಗಡಿ ಎದುರು ಕುಳಿತಿದ್ದ ಕೆಲಸಗಾರರು     

ಬೆಂಗಳೂರು: ಎಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರ್ ಉತ್ಪನ್ನಗಳ ಮಾರಾಟ ಕೇಂದ್ರವಾದ ನಗರದ ಎಸ್‌.ಪಿ ರಸ್ತೆಯಲ್ಲಿ ಶುಕ್ರವಾರ ಬಂದ್ ವಾತಾವರಣ ಕಂಡುಬಂತು. ಬಾಗಿಲು ಮುಚ್ಚಿದ್ದ ಅಂಗಡಿ ಎದುರಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೊಲೀಸರ ಕಾವಲು ಇಡೀ ರಸ್ತೆಗಿತ್ತು.

ತಿಗಳರಪೇಟೆಯ ನಿವಾಸಿ ಆಗಿದ್ದ ಕೆ. ಸುಬ್ರಮಣಿ ಎಂಬುವರು ಗುರುವಾರ ನಿಧನರಾಗಿದ್ದು, ಅವರ ಬೆಂಬಲಿಗರು ಇಡೀ ಎಸ್‌.ಪಿ. ರಸ್ತೆಯನ್ನೇ ಬಂದ್ ಮಾಡಿಸಿದರು. ಉತ್ಪನ್ನಗಳ ಖರೀದಿಗೆ ಬಂದಿದ್ದ ಸಾರ್ವಜನಿಕರು, ಅಂಗಡಿಗಳು ಬಾಗಿಲು ಮುಚ್ಚಿದ್ದು ನೋಡಿ ವಾಪಸ್ ಹೋದರು.

ಹಲಸೂರು ಗೇಟ್ ಠಾಣೆಯ ರೌಡಿಶೀಟರ್‌ ಪಟ್ಟಿಯಲ್ಲಿ ಹೆಸರಿದ್ದ ಸುಬ್ರಮಣಿ, ಎರಡು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬರದೇ ಗುರುವಾರ ನಿಧನ ಹೊಂದಿದರು. ಅವರಿಗೆ ಅಂತಿಮ ನಮನ ಸಲ್ಲಿಸುವುದಕ್ಕಾಗಿ ಬೆಂಬಲಿಗರು, ಸುಬ್ರಮಣಿ ಅವರ ಭಾವಚಿತ್ರವಿದ್ದ ಬ್ಯಾನರ್‌ಗಳನ್ನು ಎಸ್‌.ಪಿ ರಸ್ತೆಯ ಹಲವೆಡೆ ಕಟ್ಟಿದ್ದರು. ಎಸ್‌.ಪಿ ರಸ್ತೆಯ ಮಾಲೀಕರನ್ನು ಭೇಟಿಯಾಗಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿ ಬಂದ್ ಆಚರಿಸಿದರು.

ADVERTISEMENT

ಸ್ವಯಂಪ್ರೇರಿತ ನಿರ್ಧಾರ: ಬಂದ್ ಬಗ್ಗೆ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ‘ಎಸ್‌.ಪಿ ರಸ್ತೆಯ ಬಹುತೇಕ ಕಟ್ಟಡಗಳ ಮಾಲೀಕರು, ಸುಬ್ರಮಣಿ ಅವರಿಗೆ ಆಪ್ತರು. ಅವರ ಸಹೋದರರ ಮಾಲೀಕತ್ವದ ಕಟ್ಟಡಗಳೂ ಇದೇ ರಸ್ತೆಯಲ್ಲಿವೆ. ಸಂಬಂಧಿಕರ ಮನವಿಯಂತೆ ಸ್ವಯಂಪ್ರೇರಿತವಾಗಿ ನಾವೇ ಅಂಗಡಿ ಬಂದ್‌ ಮಾಡಿದ್ದೇವೆ. ಅಂಗಡಿ ಮುಚ್ಚುವಂತೆ ಯಾರೊಬ್ಬರೂ ನಮ್ಮನ್ನು ಒತ್ತಾಯಿಸಿಲ್ಲ’ ಎಂದು ಹೇಳಿದರು.

‘ಅಂಗಡಿಗಳನ್ನು ಬಂದ್ ಮಾಡಿದ್ದು ಇದೇ ಮೊದಲಲ್ಲ. ತಿಗಳರಪೇಟೆಯಲ್ಲಿ ಯಾರಾದರೂ ಗಣ್ಯರು ನಿಧನರಾದರೆ, ಅವರ ಅಂತಿಮ ಯಾತ್ರೆ ಎಸ್‌.ಪಿ ರಸ್ತೆ ಮೂಲಕವೇ ಹಾದು ಹೋಗುತ್ತದೆ. ಅದಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಆಗಾಗ ಅಂಗಡಿಗಳನ್ನು ಬಂದ್ ಮಾಡುತ್ತಿರುತ್ತೇವೆ’ ಎಂದರು.

ಹಲಸೂರು ಗೇಟ್‌ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿ, ‘ಸ್ಥಳೀಯರೆಲ್ಲರೂ ಸ್ವಯಂಪ್ರೇರಿತ ನಿರ್ಣಯ ಕೈಗೊಂಡು ಬಂದ್ ಮಾಡಿದ್ದರು. ಸಂಜೆ ವೇಳೆಗೆ ಎಲ್ಲ ಅಂಗಡಿಗಳು ಬಾಗಿಲು ತೆರೆದಿವೆ. ಒತ್ತಾಯದಿಂದ ಬಂದ್ ಮಾಡಿಸಿದ್ದ ಬಗ್ಗೆ ಯಾರೊಬ್ಬರೂ ಮಾಹಿತಿ ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು’ ಎಂದರು.

‘ಕೆಲ ಪ್ರಕರಣಗಳಲ್ಲಿ ಆರೋಪಿ ಆಗಿದ್ದ ಸುಬ್ರಮಣಿ, ಅನಾರೋಗ್ಯಕ್ಕೆ ತುತ್ತಾದ ನಂತರ ಹಾಸಿಗೆ ಹಿಡಿದಿದ್ದ. ಹಲವು ವರ್ಷಗಳ ಹಿಂದೆಯೇ ಆತನ ಹೆಸರನ್ನು ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲಾಗಿತ್ತು. ಈಗ ನಡೆದಿರುವ ಬಂದ್‌ನಿಂದ ಯಾರಿಗಾದರೂ ತೊಂದರೆ ಉಂಟಾಗಿದ್ದರಿಂದ ದೂರು ನೀಡಬಹುದು. ಅದರನ್ವಯ ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.