ADVERTISEMENT

ರಾಜ್ಯದಲ್ಲಿ 23 ಸಾವಿರ ಸಕ್ರಿಯ ರೌಡಿಗಳು

ಅಕ್ರಮ ಚಟುವಟಿಕೆಗೆ ಕಡಿವಾಣ: ರೌಡಿಗಳ ಚಲನವಲನದ ಮಾಹಿತಿ ಸಂಗ್ರಹ

ಕೆ.ಎಸ್.ಸುನಿಲ್
Published 25 ಸೆಪ್ಟೆಂಬರ್ 2025, 0:30 IST
Last Updated 25 ಸೆಪ್ಟೆಂಬರ್ 2025, 0:30 IST
ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು 
ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು    

ಬೆಂಗಳೂರು: ರೌಡಿಗಳ ಅಕ್ರಮ ಚಟುವಟಿಕೆ, ಗೂಂಡಾವರ್ತನೆಗೆ ಕಡಿವಾಣ ಹಾಕುವ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ‌ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಪ್ರಸ್ತುತ ಮಾಡುತ್ತಿರುವ ಕೆಲಸ ಹಾಗೂ ಅವರ ಚಲನವಲನಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 23,016 ಸಕ್ರಿಯ ರೌಡಿಗಳಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 8,245 ರೌಡಿಗಳು ಇದ್ದು, ಈ ಪೈಕಿ 7,338 ಮಂದಿ ಸಕ್ರಿಯವಾಗಿದ್ದಾರೆ. ಕಲಬುರಗಿಯಲ್ಲಿ 1,934, ಬೆಂಗಳೂರು ದಕ್ಷಿಣದಲ್ಲಿ 952, ತುಮಕೂರಿನಲ್ಲಿ 856 ಮತ್ತು ಹಾಸನದಲ್ಲಿ 553 ರೌಡಿಗಳು ಸಕ್ರಿಯವಾಗಿದ್ದಾರೆ.

ಗೂಂಡಾ ಕಾಯ್ದೆಯಡಿ 2023ನೇ ಸಾಲಿನಲ್ಲಿ 677 ರೌಡಿಗಳನ್ನು ಗಡಿಪಾರು ಮಾಡಿ  52 ಮಂದಿಯನ್ನು ಬಂಧಿಸಲಾಗಿದೆ. 2024ರಲ್ಲಿ 906 ರೌಡಿಗಳನ್ನು ಗಡಿಪಾರು ಮಾಡಿ 41 ಜನರನ್ನು ಬಂಧಿಸಿದ್ದು, 2025ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 300 ರೌಡಿಗಳನ್ನು ಗಡಿಪಾರು ಮಾಡಿ, 21 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 1,883 ಮಂದಿಯನ್ನು ಗಡಿಪಾರು ಮಾಡಲಾಗಿದೆ.

ADVERTISEMENT

ವಿವಿಧ ಜಿಲ್ಲೆಗಳ ರೌಡಿಗಳ ವಿರುದ್ಧ ಈಗಾಗಲೇ 21,456 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಹಲವು ರೌಡಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ‌

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ರೌಡಿಗಳು ಕೃತ್ಯವೆಸಗಿ ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಶೀಟರ್‌ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಅನೇಕ ಪ್ರಕರಣಗಳಲ್ಲಿ ಜೈಲು ಪಾಲಾಗಿ ಹೊರ ಬಂದು ಮತ್ತೆ ರೌಡಿ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.

ಸರ ಕಳ್ಳತನ, ದರೋಡೆ, ರೌಡಿಗಳ ಪುಂಡಾಟ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಮುಖ್ಯವಾಗಿ ರೌಡಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹಾಗಾಗಿ ರೌಡಿ ಚಟುವಟಿಕೆಗಳನ್ನು ನಿಗ್ರಹಿಸಲು ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ಇಡಲಾಗುತ್ತಿದೆ.

ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಬೆಂಗಳೂರಿನಲ್ಲಿ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ನೈರುತ್ಯ, ವಾಯವ್ಯ, ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ವೈಟ್‌ಫೀಲ್ಡ್‌ ವಿಭಾಗ ವ್ಯಾಪ್ತಿಯ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. 1,476 ರೌಡಿಗಳ ಮನೆ ಮೇಲೆ ದಾಳಿ ಮಾಡಿ, ಶೋಧ ನಡೆಸಿದರು. ಅವರ ವೈಯಕ್ತಿಕ ವಿವರ, ಉದ್ಯೋಗ, ಬಳಸುತ್ತಿರುವ ಮೊಬೈಲ್ ಸಂಖ್ಯೆ, ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ರೌಡಿಗಳ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ವಾರಂಟ್ ಮತ್ತು ಪ್ರೊಕ್ಲಮೇಷನ್ ಆಗಿರುವ ಬಗ್ಗೆ ಪರಿಶೀಲನೆ ನಡೆಸಿದರು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಯಿಸಿಕೊಂಡರು.

ರಾಜ್ಯದಲ್ಲಿ ಅತಿ ಹೆಚ್ಚು ರೌಡಿಗಳು ಹೊಂದಿರುವ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2023ರಲ್ಲಿ 2,301 ರೌಡಿಗಳ ಪರಿಶೀಲನೆ ಮಾಡಲಾಗಿತ್ತು. ಆ ಪೈಕಿ 2,062 ರೌಡಿಗಳು ಸಕ್ರಿಯರಾಗಿದ್ದರು. 2025ರ ಜುಲೈವರೆಗೆ 2,847 ಮಂದಿ ರೌಡಿಗಳ ತಪಾಸಣೆ ವೇಳೆ, 2,558 ರೌಡಿಗಳು ಅಕ್ರಮ ಚಟುವಟಿಕೆಗಳಲ್ಲಿ ಮುಂದುವರಿದಿರುವುದು ಗೊತ್ತಾಗಿದೆ. 288 ರೌಡಿಗಳ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಿವೆ. ಶಸ್ತ್ರಾಸ್ತ್ರ ಕಾಯ್ದೆಯಡಿ 17 ಹಾಗೂ ಎನ್‌ಡಿಪಿಎಸ್ (ಡ್ರಗ್ಸ್‌) ಪ್ರಕರಣದಲ್ಲಿ 14 ಮಂದಿಯ ಬಂಧನವಾಗಿದೆ.

ಮತ್ತೆ ಪ್ರಕರಣ ದಾಖಲು

‘ಬೆಂಗಳೂರು ನಗರದಲ್ಲಿ ಸಾವಿರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಆಯಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಪದೇ ಪದೇ ಅಪರಾಧಗಳಲ್ಲಿ ತೊಡಗುವ ಎಂಒಬಿಗಳ (ಅಪರಾಧ ಹಿನ್ನಲೆಯುಳ್ಳವರು) 165 ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.  ನ್ಯಾಯಾಲಯದ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕೆಲವು ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಈ ಪೈಕಿ ಮೂವರು ನಗರಕ್ಕೆ ವಾಪಸ್ ಬಂದು ನೆಲಸಿರುವುದು ದಾಳಿ ವೇಳೆ ಗೊತ್ತಾಗಿದೆ. ಅವರ ವಿರುದ್ಧ ಮತ್ತೆ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.