ADVERTISEMENT

ಕಲ್ಲು ಗಣಿ: ₹1,175 ಕೋಟಿ ಬಾಕಿ, ಗುತ್ತಿಗೆದಾರರಿಗೆ ನೋಟಿಸ್‌

ರಾಜ್ಯದಲ್ಲಿ 2,100 ಕಲ್ಲು ಗಣಿ ಗುತ್ತಿಗೆ

ಹೊನಕೆರೆ ನಂಜುಂಡೇಗೌಡ
Published 21 ಡಿಸೆಂಬರ್ 2019, 20:42 IST
Last Updated 21 ಡಿಸೆಂಬರ್ 2019, 20:42 IST
   

ಬೆಂಗಳೂರು: ರಾಜ್ಯದಲ್ಲಿ ಅದಿರಿನಂತೆ ಕಲ್ಲಿನ ಲೂಟಿಯೂ ನಡೆಯುತ್ತಿದ್ದು, ಗಣಿ ಗುತ್ತಿಗೆದಾರರಿಂದ ಅಧಿಕೃತವಾಗಿ ಬರಬೇಕಾದ ₹1,175 ಕೋಟಿ ರಾಜಧನ ಬಾಕಿ ವಸೂಲು ಮಾಡಲು ಸರ್ಕಾರ ವಿಫಲವಾಗಿದೆ.

2017– 18ನೇ ಸಾಲಿನವರೆಗೆ ಕಲ್ಲು ಗಣಿ ಗುತ್ತಿಗೆದಾರರಿಂದ ₹1,353 ಕೋಟಿ ರಾಜಧನ ಬಾಕಿ ಬರಬೇಕಿದ್ದು, ಇದರಲ್ಲಿ ₹178 ಕೋಟಿ ಮಾತ್ರ ವಸೂಲು ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಾಧ್ಯವಾಗಿದೆ.

ರಾಜ್ಯದಲ್ಲಿ ಈಗ 2,100 ಕಲ್ಲು ಗಣಿ ಗುತ್ತಿಗೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಎರಡು ದಶಕಗಳಲ್ಲಿ ಈ ಗಣಿಗಳಿಂದ ಎಷ್ಟು ಪ್ರಮಾಣದ ಕಲ್ಲುಗಳನ್ನು ಹೊರತೆಗೆದು ಸಾಗಣೆ ಮಾಡಲಾಗಿದೆ ಎಂಬ ನಿಖರವಾದ ಮಾಹಿತಿ ಇಲಾಖೆ ಬಳಿ ಇಲ್ಲ. ಗುತ್ತಿಗೆದಾರರೂ ಲೆಕ್ಕ ಇಟ್ಟಿಲ್ಲ.

ADVERTISEMENT

ಆದರೆ, ಇತ್ತೀಚೆಗೆ ಡ್ರೋನ್‌ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಭೂಮಿ ಮೇಲ್ಮೈ ಹಾಗೂ ಗಣಿ ಗುಂಡಿಗಳ ಗಾತ್ರಗಳನ್ನು ಆಧರಿಸಿ ಗಣಿಗಾರಿಕೆ ಮಾಡಿರುವ ಪ್ರಮಾಣ ಅಂದಾಜಿಸಿ, ಕಲ್ಲಿನ ಮೌಲ್ಯ ನಿರ್ಧರಿಸಲಾಗಿದೆ. ಇಲಾಖೆಯ ಈ ಲೆಕ್ಕಾಚಾರಕ್ಕೆ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕಾರ ಬರಬೇಕಾಗಿರುವ ರಾಜಧನದ ಬಾಕಿ ₹ 1,175 ಕೋಟಿ. ಗುತ್ತಿಗೆದಾರರ ಪ್ರಕಾರ ಬಾಕಿ ಕೊಡಬೇಕಾಗಿರುವುದು ₹ 600 ಕೋಟಿ. ಇದೇ ತಿಕ್ಕಾಟದಿಂದಾಗಿ ಬಾಕಿ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪ್ರತಿ ಟನ್‌ ಕಲ್ಲಿಗೆ 2000ನೇ ವರ್ಷದಲ್ಲಿ ₹15 ರಾಜಧನ ಇತ್ತು. 2008ರ ಆಸುಪಾಸಿನಲ್ಲಿ ₹30ಕ್ಕೆ ಏರಿತ್ತು. 2013ರ ಬಳಿಕ ಪ್ರತಿ ಟನ್‌ ಕಲ್ಲಿಗೆ ₹60 ನಿಗದಿಪಡಿಸಲಾಗಿದೆ. ಡ್ರೋನ್‌ ಸಮೀಕ್ಷೆ ಬಳಿಕ ಕಲ್ಲಿನ ರಾಜಧನವನ್ನು ಸಾರಾಸಗಟಾಗಿ ₹ 60ಕ್ಕೆ ನಿಗದಿ‍ಪಡಿಸಿದ್ದು, ಹಿಂದಿನ ವರ್ಷಗಳಿಗೂ ಸರಿಯಾದ ಕ್ರಮ ಅಲ್ಲ ಎಂಬುದು ಗುತ್ತಿಗೆದಾರರ ತಗಾದೆ.

ರಾಜಧನ ಬಾಕಿ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಿದ್ದರೂ ರಾಜಧನ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಟನ್‌ ಕಲ್ಲಿಗೆ ₹ 60 ಪಾವತಿಸಲು ಹಿಂದುಮುಂದು ನೋಡುವ ಗುತ್ತಿಗೆದಾರರು ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರತಿ ಲೋಡ್‌ ಜಲ್ಲಿಯನ್ನು ₹ 15ಸಾವಿರಕ್ಕೆ ಮಾರುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಬೆಂಗಳೂರಿನ ಬನ್ನೇರುಘಟ್ಟ, ತಾವರೆಕೆರೆ, ತುಮಕೂರು, ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ಮುಂದುವರಿದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೇ ₹ 412 ಕೋಟಿ ರಾಜಧನ ಬಾಕಿ ಇದೆ. ಕೋಲಾರ ₹ 171 ಕೋಟಿ, ತುಮಕೂರು ಜಿಲ್ಲೆಯಲ್ಲಿ ₹ 146 ಕೋಟಿ ಬಾಕಿ ಬರಬೇಕಿದೆ.

ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆ
ಆಡಳಿತ ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು ಬೇನಾಮಿ ಮತ್ತು ಸಂಬಂಧಿಕರ ಹೆಸರಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ರಾಜಧನ ಬಾಕಿ ವಸೂಲಿಗೆ ತೊಂದರೆ ಆಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.

ಇದೇ ಕಾರಣದಿಂದಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.