ADVERTISEMENT

ಅಕ್ರಮದ ವಿರುದ್ಧ ಚುನಾವಣಾ ಆಯೋಗ ಮೌನ: ಶರವಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:38 IST
Last Updated 26 ಅಕ್ಟೋಬರ್ 2020, 20:38 IST
ಟಿ.ಎ.ಶರವಣ
ಟಿ.ಎ.ಶರವಣ   

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡೆಸುತ್ತಿರುವ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಆರೋಪಿಸಿದರು.

ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಭ್ಯರ್ಥಿ ಸೆಟ್‌ ಟಾಪ್‌ ಬಾಕ್ಸ್‌ ವಿತರಿಸಿ ಮತ ಖರೀದಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಜಾತಿ ಹೆಸರಿನಲ್ಲಿ ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ. ಎಲ್ಲವನ್ನೂ ಗಮನಿಸಿದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು.

ಬಿಜೆಪಿ ಅಭ್ಯರ್ಥಿ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡಿದ್ದರಿಂದ ಉಪ ಚುನಾವಣೆ ಬಂದಿದೆ. ಆದರೆ, ಜೆಡಿಎಸ್‌ ಅಭ್ಯರ್ಥಿ ಮಾರಾಟವಾಗಿದ್ದಾರೆ ಎಂದು ಕೆಲವರು ದುರುದ್ದೇಶದಿಂದ ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂತಹ ಕೃತ್ಯಗಳ ಮೂಲಕ ಜೆಡಿಎಸ್‌ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸಲು ಯತ್ನಿಸುವವರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಕರ್ತನ ಆಯ್ಕೆ ತಪ್ಪೆ?:

ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಮಾತನಾಡಿ, ‘ನನ್ನ ಸ್ಪರ್ಧೆಯಿಂದ ಭಯಗೊಂಡಿರುವವರು ನಾನು ಮಾರಾಟ ಆಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್‌ ನೀಡಿದ್ದು ತಪ್ಪೆ’ ಎಂದು ಪ್ರಶ್ನಿಸಿದರು.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಮಾತನಾಡಿ, ‘ಮುನಿರತ್ನ ಅವರನ್ನು ಬೆಳೆಸಿದ್ದೇ ಡಿ.ಕೆ. ಶಿವಕುಮಾರ್‌ ಸಹೋದರರು. ಕನಕಪುರದಿಂದ ಗೂಂಡಾಗಳನ್ನು ಕರೆತಂದು ಚುನಾವಣೆಯಲ್ಲಿ ಬೆಂಬಲ ನೀಡಿದ್ದರು. ಈಗ ಜಾತಿ ಹೆಸರಿನಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಚುನಾವಣಾ ಆಯೋಗಕ್ಕೆ ದೂರು

ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪದ ಮೇಲೆ ‘ಕೆಂಪೇಗೌಡ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ’ ಫೇಸ್‌ಬುಕ್‌ ಪೇಜ್‌ ಅಡ್ಮಿನ್‌ ವಿರುದ್ಧ ಪಕ್ಷದ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.