ADVERTISEMENT

₹ 10 ಲಕ್ಷ ವಂಚನೆ: ವಿಮಾ ಕಂಪನಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 6:38 IST
Last Updated 29 ಡಿಸೆಂಬರ್ 2022, 6:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವೈಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ಖರೀದಿಗೆ ಸಾಲ ನೀಡುವುದಾಗಿ ಹೇಳಿ ವಿಮಾ ಕಂಪನಿಯೊಂದು ಮಹಿಳೆಯಿಂದ ₹ 10 ಲಕ್ಷ ಪಡೆದು ವಂಚಿಸಿದ್ದು, ಆ ಕಂಪನಿ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸಹಕಾರ ನಗರದ ನಿವಾಸಿ ಶ್ರೀದೇವಿ ಎಂಬುವವರು ಆಸ್ತಿ ಖರೀದಿಗಾಗಿ ಸಾಲ ಪಡೆಯಲು ನಿರ್ಧರಿಸಿದ್ದರು. ಸಂಸ್ಥೆಯೊಂದು ನೀಡಿದ ಜಾಹೀರಾತು ಗಮನಿಸಿ, ವೈಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ವಿನಾಯಕ ವೃತ್ತದ ಬಳಿಯ ಫೈನಾನ್ಸ್‌ಗೆ ತೆರಳಿ ಸಾಲದ ಬಗ್ಗೆ ವಿಚಾರಿಸಿದ್ದರು. ಕಂಪನಿಯಲ್ಲಿದ್ದ ಸುಗುಣ ಎಂಬಾಕೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥ್ ಸುಬ್ಬಯ್ಯಶೆಟ್ಟಿ, ಹಿರಿಯ ವ್ಯವಸ್ಥಾಪಕ ಲಕ್ಷ್ಮಿನಾರಾಯಣ್‌, ಮ್ಯಾನೇಜರ್‌ ವೆಂಕಟೇಶ್‌ ಅವರನ್ನು ಪರಿಚಯಿಸಿದ್ದರು. ಅದಾದ ಮೇಲೆ ಕಂಪನಿಯ ಷರತ್ತಿನ ಬಗ್ಗೆ ತಿಳಿಸಿ ಹಣ ಪಡೆದು ವಂಚಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಶ್ರೀದೇವಿಗೆ ಆಸ್ತಿ ಖರೀದಿಗೆ ₹ 10 ಕೋಟಿಗೆ ಮನವಿ ಮಾಡಿದ್ದರು. ಸಾಲದ ಮೇಲಿನ ವಿಮೆ ಶುಲ್ಕವು ₹ 5 ಲಕ್ಷವಾಗಲಿದೆ ಎಂದು ಕಂಪನಿಯ ಸಿಬ್ಬಂದಿ ತಿಳಿಸಿದ್ದರು. ಸಾಲ ನೀಡಲು ಸಾಧ್ಯವಾಗದಿದ್ದರೆ ಬಡ್ಡಿ ಸಹಿತ ಹಣ ವಾಪಸ್‌ ನೀಡಲಾಗುವುದು ಎಂದು ಕಂಪನಿಯವರು ತಿಳಿಸಿದ್ದರು. ಅದನ್ನೇ ನಂಬಿದ್ದ ಶ್ರೀದೇವಿ, ಎರಡು ಪ್ರತ್ಯೇಕ ಅರ್ಜಿ ಪಡೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ADVERTISEMENT

‘ವಿಮೆ ಶುಲ್ಕ, ಲೀಗಲ್‌ ಚಾರ್ಜ್‌, ಭೌತಿಕ ಪರಿಶೀಲನೆಗೆಂದು ₹ 10 ಲಕ್ಷವನ್ನು ಶ್ರೀದೇವಿ ಕಂಪನಿಗೆ ಪಾವತಿಸಿದ್ದರು. ಅದಾದ ಮೇಲೆ ಕಂಪನಿ ಸಿಬ್ಬಂದಿಯೂ ಸಾಲವನ್ನೂ ನೀಡಿಲ್ಲ. ಮೊಬೈಲ್‌ ಸಹ ಸ್ವಿಚ್ಡ್‌ ಆಫ್‌ ಆಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮುನಿವೆಂಕಟಮ್ಮ, ರಾಜಶೇಖರ್‌, ತನುಜಾ, ಮರೀಗೌಡ, ರೋಹಿತ್‌, ಪ್ರವೀಣ್‌ ಅವರಿಗೂ ಇದೇ ವಿಮಾ ಕಂಪನಿ ಸಿಬ್ಬಂದಿ ವಂಚಿಸಿದ್ಧಾರೆ’ ಎಂದು ಮೂಲಗಳು ಹೇಳಿವೆ. ತನಿಖೆಗೆ ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.