ADVERTISEMENT

New Year: ಏಳು ದಿನಗಳಲ್ಲಿ ₹ 1,262 ಕೋಟಿಯ ಮದ್ಯ ಬಿಕರಿ!

ಕೊನೆಯ ವಾರದಲ್ಲಿ ಬೊಕ್ಕಸಕ್ಕೆ ಹರಿದುಬಂದ ₹ 657.79 ಕೋಟಿ ತೆರಿಗೆ ವರಮಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 16:13 IST
Last Updated 1 ಜನವರಿ 2023, 16:13 IST
   

ಬೆಂಗಳೂರು: 2022ರ ಡಿಸೆಂಬರ್‌ನ ಕೊನೆಯ ಏಳು ದಿನಗಳಲ್ಲಿ ₹ 1,262.65 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಶೇಕಡ 14.86ರಷ್ಟು ಹೆಚ್ಚಳವಾಗಿದೆ.

ಡಿಸೆಂಬರ್‌ 23ರಿಂದ 31ರ ಅವಧಿಯಲ್ಲಿ ಏಳು ದಿನಗಳ ಕಾಲ ರಾಜ್ಯ ಪಾನೀಯ ನಿಗಮ ವಹಿವಾಟು ನಡೆಸಿದೆ. ಡಿ. 24 ಮತ್ತು 25ರಂದು ವಹಿವಾಟು ಇರಲಿಲ್ಲ. ವರ್ಷದ ಕೊನೆಯ ಏಳು ದಿನಗಳ ಅವಧಿಯಲ್ಲಿ 35.70 ಲಕ್ಷ ಪೆಟ್ಟಿಗೆಗಳಷ್ಟು ದೇಶೀಯವಾಗಿ ತಯಾರಾದ ಮದ್ಯ (ಐಎಂಎಎಲ್‌) ಹಾಗೂ ಬಿಯರ್‌ ಮಾರಾಟ ನಡೆದಿದೆ.

ವರ್ಷಾಂತ್ಯದಲ್ಲಿ 20.66 ಲಕ್ಷ ಪೆಟ್ಟಿಗೆಗಳಷ್ಟು ಐಎಂಎಲ್‌ ಮಾರಾಟವಾಗಿದೆ. 2020ರ ಡಿಸೆಂಬರ್‌ನ ಇದೇ ಅವಧಿಯಲ್ಲಿ 17.48 ಲಕ್ಷ ಪೆಟ್ಟಿಗೆಗಳಷ್ಟು ಐಎಂಎಲ್‌ ಮಾರಾಟವಾಗಿತ್ತು. 2021ರ ಡಿಸೆಂಬರ್‌ ಕೊನೆಯ ವಾರದಲ್ಲಿ 19.46 ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟ ನಡೆದಿತ್ತು. 2021ಕ್ಕೆ ಹೋಲಿಸಿದರೆ 2022ರ ಅಂತ್ಯದಲ್ಲಿ ಐಎಂಎಲ್‌ ಮಾರಾಟದಲ್ಲಿ ಶೇ 6.17ರಷ್ಟು ಹೆಚ್ಚಳವಾಗಿದೆ.

ADVERTISEMENT

ಬಿಯರ್‌ ಖರೀದಿ ಭಾರಿ ಹೆಚ್ಚಳ: ಡಿಸೆಂಬರ್‌ ಕೊನೆಯ ವಾರದಲ್ಲಿ ರಾಜ್ಯದಲ್ಲಿ 15.04 ಲಕ್ಷ ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿದೆ. 2020ರ ಡಿಸೆಂಬರ್‌ ಕೊನೆಯ ವಾರ 10.62 ಲಕ್ಷ ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿದ್ದರೆ, 2021ರ ಡಿಸೆಂಬರ್‌ ಕೊನೆಯ ವಾರದಲ್ಲಿ 11.24 ಲಕ್ಷ ಪೆಟ್ಟಿಗೆ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಯರ್‌ ಮಾರಾಟದಲ್ಲಿ ಶೇ 33.81ರಷ್ಟು ಹೆಚ್ಚಳ ದಾಖಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

₹ 657 ಕೋಟಿ ತೆರಿಗೆ ಸಂಗ್ರಹ: ಡಿ.23ರಿಂದ ಡಿ.31ರ ಅವಧಿಯಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 657.79 ಕೋಟಿ ತೆರಿಗೆ ಸಂದಾಯವಾಗಿದೆ. 2020ರ ಡಿಸೆಂಬರ್‌ ಕೊನೆಯ ವಾರ ಮದ್ಯ ಮಾರಾಟದಿಂದ ₹ 614.68 ಕೋಟಿ ತೆರಿಗೆ ಸಂಗ್ರಹವಾಗಿತ್ತು. 2021ರ ಇದೇ ಅವಧಿಯಲ್ಲಿ ₹ 736 ಕೋಟಿ ಸಂಗ್ರಹವಾಗಿತ್ತು.

‘2022ರ ಡಿಸೆಂಬರ್‌ ಕೊನೆಯ ವಾರದಲ್ಲಿ ಐಎಂಎಲ್‌ ಮತ್ತು ಬಿಯರ್‌ ಮಾರಾಟದ ನಿಖರ ಮಾಹಿತಿ ಇಲಾಖೆಗೆ ದೊರಕಿದೆ. ಆದರೆ, ತೆರಿಗೆ ಸಂಗ್ರಹದ ಸಂಪೂರ್ಣ ಮೊತ್ತ ಲಭಿಸಲು ಕೆಲವು ದಿನಗಳು ಬೇಕಾಗುತ್ತವೆ. ಮಾರಾಟದಲ್ಲಿ ಗಣನೀಯ ಹೆಚ್ಚಳ ಆಗಿರುವುದರಿಂದ ತೆರಿಗೆ ಸಂಗ್ರಹವೂ ಹಿಂದಿನ ವರ್ಷಕ್ಕಿಂತ ಹೆಚ್ಚಾಗಲಿದೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ಕಾರಣದಿಂದ 2020ರ ವರ್ಷಾಂತ್ಯದಲ್ಲಿ ಮದ್ಯ ಮಾರಾಟದಲ್ಲಿ ಹೆಚ್ಚಿನ ಏರಿಕೆಯಾಗಿರಲಿಲ್ಲ. 2019ರ ವರ್ಷಾಂತ್ಯಕ್ಕೆ ಹೋಲಿಸಿದರೆ ಶೇ 1.38ರಷ್ಟು ಹೆಚ್ಚಳ ಮಾತ್ರ ದಾಖಲಾಗಿತ್ತು. 2021ರ ವರ್ಷಾಂತ್ಯದಲ್ಲಿ ಪರಿಸ್ಥಿತಿ ಚೇತರಿಸಿಕೊಂಡಿತ್ತು. ಆಗ, 2020ರ ವರ್ಷಾಂತ್ಯಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಶೇ 8.05ರಷ್ಟು ಹೆಚ್ಚಳ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.