ADVERTISEMENT

ರಾಜ್ಯಕ್ಕೆ ವರ್ಷಕ್ಕೆ ₹ 20 ಸಾವಿರ ಕೋಟಿ ನಷ್ಟ: ಸಿದ್ದರಾಮಯ್ಯ

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ– ಐದು ವರ್ಷ ವಿಸ್ತರಣೆಗೆ ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:58 IST
Last Updated 1 ಜುಲೈ 2022, 2:58 IST
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ 
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ    

ನವದೆಹಲಿ: ‘ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪರಿಹಾರವನ್ನು ಕನಿಷ್ಠ ಐದು ವರ್ಷ ವಿಸ್ತರಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ ₹ 20 ಸಾವಿರ ಕೋಟಿ ನಷ್ಟ ಆಗಲಿದೆ’ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಶೇ 14ರಷ್ಟು ನಷ್ಟ ಪರಿಹಾರ ನೀಡುವ ವ್ಯವಸ್ಥೆ 2017ರ ಜುಲೈನಲ್ಲಿ ಆರಂಭವಾಯಿತು. ಈ ವ್ಯವಸ್ಥೆ ಗುರುವಾರ ಕೊನೆಗೊಂಡಿದೆ. ಈ ವ್ಯವಸ್ಥೆ ಮುಂದುವರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಎಸ್‌ಟಿ ಸಭೆಯಲ್ಲಿ ಒತ್ತಡ ಹೇರಿಲ್ಲ. ಇದು ರಾಜ್ಯಕ್ಕೆ ಬೊಮ್ಮಾಯಿ ಮಾಡಿರುವ ಅನ್ಯಾಯ’ ಎಂದು ಟೀಕಿಸಿದರು.

‘ಜಿಎಸ್‌ಟಿ ಜಾರಿಯ ಮೊದಲು ಶೇ 14 ಇದ್ದ ತೆರಿಗೆ ಬೆಳವಣಿಗೆ ದರ ಈಗ ಶೇ 6ಕ್ಕೆ ಇಳಿದಿದೆ. ಇದಕ್ಕೆ ಕೋವಿಡ್‌ ನೆಪ ಹೇಳುತ್ತಿದ್ದಾರೆ.ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಯಾರು? ಕೇಂದ್ರ ಸರ್ಕಾರ ಅಲ್ಲವೇ?’ ಎಂದು ಅವರು ಪ್ರಶ್ನಿಸಿದರು.

ADVERTISEMENT

’ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಭಾರಿ ಹೆಚ್ಚಳ ಮಾಡಲಾಗಿದೆ.ರೈತರು ಹಾಗೂ ಜನಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್‌ ಮೆರಿನ್‌ ಪಂಪ್‌ಗಳ ಮೇಲೆ ಶೇ 12 ಇದ್ದ ತೆರಿಗೆಯನ್ನು ಶೇ 15ಕ್ಕೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್‌ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು ಶೇ 12ರಿಂದ 18ಕ್ಕೆ ಏರಿಸಿದ್ದಾರೆ. ಬರೆಯುವ ಮತ್ತು ಮುದ್ರಿಸುವ ಇಂಕ್‌ಗಳ ಮೇಲಿನ ತೆರಿಗೆಯನ್ನು ಶೇ 12ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ. ಇದು ನರೇಂದ್ರ ಮೋದಿ ಸರ್ಕಾರ ಮಾಡಿರುವ ಘೋರ ಅಪರಾಧ’ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆಯಲ್ಲಿ ಬಿಜೆ‍ಪಿಗೆ ಅಭ್ಯರ್ಥಿಗಳೇ ಇಲ್ಲ: ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ. ನಾವು 130ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ಇರುವಷ್ಟು ಅಭ್ಯರ್ಥಿಗಳು ಬೇರೆ ಯಾವ ಪಕ್ಷಗಳಿಗೂ ಇಲ್ಲ. ನಮಗೆ ಒಂದೊಂದು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳು 10ರಿಂದ 12 ಮಂದಿ ಇದ್ದಾರೆ.ಕೆಲವೊಮ್ಮೆ ಇದು ಸಮಸ್ಯೆ ಆಗುತ್ತದೆ. ಕಾರಣ ಎಲ್ಲರಿಗೂ ಟಿಕೆಟ್‌ ಕೊಡಲು ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ. ಉದಾಹರಣೆಗೆ ಮೈಸೂರು ಭಾಗದಲ್ಲಿ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಚ್.ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್‌ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಇಲ್ಲ’ ಎಂದು ವ್ಯಂಗ್ಯವಾಡಿದರು.

*

ಉದಯಪುರದಲ್ಲಿ ಕನ್ಹಯ್ಯ ಲಾಲ್ ಅವರನ್ನು ಕೊಲೆ ಮಾಡಿದವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.