ADVERTISEMENT

180 ಲಕ್ಷ ಟನ್ ಹಳೆ ಕಸ ಕರಗಿಸಲು ₹989 ಕೋಟಿ!

ಎನ್‌ಜಿಟಿ ದಂಡ ವಿಧಿಸಿದ ಬಳಿಕ ಎಚ್ಚೆತ್ತ ಕರ್ನಾಟಕ ಸರ್ಕಾರ

ಮಂಜುನಾಥ್ ಹೆಬ್ಬಾರ್‌
Published 26 ನವೆಂಬರ್ 2022, 19:31 IST
Last Updated 26 ನವೆಂಬರ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕರ್ನಾಟಕದ ಮಹಾನಗರ ಪಾಲಿಕೆ ವ್ಯಾಪ್ತಿಗಳ ಭೂಭರ್ತಿ ಘಟಕಗಳಲ್ಲಿ ವರ್ಷಗಳಿಂದ ಕೊಳೆಯುತ್ತಿರುವ 180 ಲಕ್ಷ ಟನ್ ಹಳೆಯ ಕಸವನ್ನು ಕರಗಿಸಲು ₹989 ಕೋಟಿ ಬೇಕಿದೆ.

ಪರಿಸರಕ್ಕೆ ಹಾನಿ ಉಂಟು ಮಾಡುವ ಘನ ಹಾಗೂ ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣಕ್ಕೆ ಕರ್ನಾಟಕ ಸರ್ಕಾರಕ್ಕೆ ₹2,900 ಕೋಟಿ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ಅಕ್ಟೋಬರ್ 14ರಂದು ಆದೇಶಿಸಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಸರ್ಕಾರವು, ₹2,046 ಕೋಟಿ ಮೊತ್ತದ ‘ನಗರ ಕಸ ವಿಲೇವಾರಿ ಕ್ರಿಯಾಯೋಜನೆ’ಯನ್ನು ಅಂತಿಮ
ಗೊಳಿಸಿದೆ. ಹಳೆಯ ಕಸ ವಿಲೇವಾರಿಗೆ ₹989 ಕೋಟಿ ಬೇಕಿದೆ ಎಂದು ಈ ಯೋಜನೆಯಲ್ಲಿ ತಿಳಿಸಲಾಗಿದೆ.

ಸ್ವಚ್ಛ ಭಾರತ ಯೋಜನೆ (ನಗರ) ಪ್ರಗತಿ ಕುರಿತು ಈಚೆಗೆ ನಡೆದಕೇಂದ್ರ ವಸತಿ ಹಾಗೂ ನಗರ ವ್ಯವಹಾರ
ಗಳ ಸಚಿವಾಲಯ, ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಯೋಜನಾ ನಿರ್ದೇಶನಾಲಯದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ಪ್ರಸ್ತಾವ ಮಂಡಿಸಲಾಗಿದೆ. ಬಿಬಿಎಂಪಿ ಹಾಗೂ 309 ನಗರ ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿಯ ಯೋಜನೆ ಇದಾಗಿದೆ.

ADVERTISEMENT

309 ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ವಸತಿ
ಹಾಗೂ ನಗರ ವ್ಯವಹಾರಗಳ ಸಚಿವಾಲಯಕ್ಕೆ 2022ರ ಸೆಪ್ಟೆಂಬರ್ 6ರಂದು ಪ್ರಸ್ತಾವ ಸಲ್ಲಿಸಲಾಗಿತ್ತು. ಬಿಬಿಎಂಪಿಯ ಕ್ರಿಯಾಯೋಜನೆಯನ್ನು ಸೆಪ್ಟೆಂಬರ್‌ 9ರಂದು ನೀಡಲಾಗಿತ್ತು. ಈ ಪ್ರಸ್ತಾವ ಪರಿಶೀಲಿಸಿರುವ ಸಚಿವಾಲಯದ ರಾಷ್ಟ್ರೀಯ ಸಲಹಾ ಸಮಿತಿಯು ಕೇಂದ್ರ ಸರ್ಕಾರದ ಪಾಲಿನ ₹648 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದೆ. ಉಳಿದ ಮೊತ್ತವನ್ನು ಕರ್ನಾಟಕ ಸರ್ಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಭರಿಸಬೇಕಿದೆ.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಕುರಿತು ಸುಪ್ರೀಂ ಕೋರ್ಟ್‌ 2014
ರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಂಬಂಧ 2017ರಲ್ಲಿ ಆದೇಶ ಹೊರಡಿಸಿತ್ತು. ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವಂತೆ ಎನ್‌ಜಿಟಿಗೆ ಸೂಚಿಸಿತ್ತು.

ಕೇಂದ್ರ ಸರ್ಕಾರದ 2016ರ ಘನತ್ಯಾಜ್ಯ ನಿಯಮದ (ತಿದ್ದುಪಡಿ) ಪ್ರಕಾರ, ಹಸಿ ಕಸ ವಿಂಗಡಿಸಿ ಗೊಬ್ಬರ ಮಾಡ
ಬೇಕು ಹಾಗೂ ಒಣ ಕಸವನ್ನು ವಿಲೇವಾರಿ ಮಾಡಬೇಕು. ಭೂಭರ್ತಿ ಘಟಕಗಳಿಗೆ ಮಿಶ್ರ ಕಸವನ್ನು ಸಾಗಿಸುವಂತಿಲ್ಲ. ಆದರೆ, ಕರ್ನಾಟಕದಲ್ಲಿ ಈಗಲೂ 191 ಭೂಭರ್ತಿ ಘಟಕಗಳಿದ್ದು, ಪ್ರತಿನಿತ್ಯ ಅಪಾರ ಪ್ರಮಾಣದ ಕಸವನ್ನು ಈ ಘಟಕಗಳಲ್ಲಿ ಸುರಿಯಲಾಗುತ್ತಿದೆ.

ಬೆಂಗಳೂರಿನ ಮಾವಳ್ಳಿ‍ಪುರ, ಮಂಡೂರು ಭೂಭರ್ತಿ ಘಟಕಗಳ ವಿರುದ್ಧ ಸ್ಥಳೀಯರು ಈ ಹಿಂದೆ ಹೋರಾಟ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.