ಬೆಳಗಾವಿ: ‘ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಉತ್ತಮ ಅಭಿಪ್ರಾಯವಿದೆ ಎಂಬುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವುದೇ ಸಾಕ್ಷಿ. ಆದರೆ, ಅಲ್ಪಸಂಖ್ಯಾತ ಮತಗಳ ಓಲೈಕೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮೆಚ್ಚಿಸಲು ಅದನ್ನು ಬಹಿರಂಗಪಡಿಸುತ್ತಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
‘ಕಾಂಗ್ರೆಸ್ ನಾಯಕರನ್ನು ಮೆಚ್ಚಿಸಲು ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ ಹೊರತು, ಆರ್‌ಎಸ್‌ಎಸ್ ಗೀತೆಯ ಪದಗಳನ್ನು ಅವರು ಹಿಂಪಡೆದಿಲ್ಲ. ಹಿಂದೂಗಳ ಒಗ್ಗಟ್ಟು ಮತ್ತು ಸಂಸ್ಕೃತಿ ರಕ್ಷಣೆಗೆ ಆರ್‌ಎಸ್‌ಎಸ್ ಶ್ರಮಿಸುತ್ತಿದೆಯೇ ಹೊರತು ಯಾವುದೇ ಸಮುದಾಯಕ್ಕೆ ವಿರೋಧಿಯಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಕಿತ್ತಾಟ ಮುಂದುವರೆದಿದೆ. ಎಲ್ಲವನ್ನೂ ಬಿಜೆಪಿ ಗಮನಿಸುತ್ತಿದೆ. ನಮ್ಮ ಪಕ್ಷಕ್ಕೆ ಸೇರಲು ಕಾಂಗ್ರೆಸ್‌ನ ಯಾವ ನಾಯಕರಿಗೂ ನಾವು ರತ್ನಗಂಬಳಿ ಹಾಸಿಲ್ಲ’ ಎಂದರು.
‘ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಸ್ವೀಕಾರಾರ್ಹವಲ್ಲ. ಚಾಮುಂಡಿ ದೇವಸ್ಥಾನವು ಹಿಂದೂಗಳ ನಂಬಿಕೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಈ ಬಗ್ಗೆ ಶಿವಕುಮಾರ್ ವಿವರವಾಗಿ ಅಧ್ಯಯನ ಮಾಡಬೇಕು’ ಎಂದು ಒತ್ತಾಯಿಸಿದರು.
‘ಒಂದು ವರ್ಗದವರು ಮತ್ತು ಎಡಪಂಥೀಯರು ಧರ್ಮಸ್ಥಳದ ಮಂಜುನಾಥ ದೇವಾಲಯ ಮತ್ತು ವೀರೇಂದ್ರ ಹೆಗ್ಗಡೆ ಅವರಿಗೆ ಅಪಖ್ಯಾತಿ ತರಲು ಪ್ರಯತ್ನಿಸುತ್ತಿದ್ದಾರೆ. ಎಸ್‌ಐಟಿ ರಚನೆ ಮತ್ತು ತನಿಖೆಗಾಗಿ ಸರ್ಕಾರ ಸಾಕಷ್ಟು ಹಣ ವ್ಯಯಿಸಿದೆ. ಆದರೆ, ಅವರಿಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಎಸ್‌ಐಟಿಯವರು ಪ್ರಕರಣದ ತನಿಖೆ ನಿಲ್ಲಿಸಲು ಆಲೋಚಿಸುತ್ತಿದ್ದರೂ, ಎಡಪಂಥೀಯರು ಮತ್ತು ಸಿದ್ದರಾಮಯ್ಯ ಆಪ್ತರು ಬಿಡುತ್ತಿಲ್ಲ’ ಎಂದು ದೂರಿದರು.
‘ಮೈಸೂರಿನಲ್ಲಿ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ಕೊಟ್ಟಿದ್ದು ಸರಿಯಲ್ಲ. ಸಿದ್ದರಾಮಯ್ಯ ಈ ವಿಚಾರದಲ್ಲಿ ತಪ್ಪು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಬಿಹಾರದಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಮತದಾರರ ಹೆಸರು ಕೈಬಿಡಲಾಗಿದೆ ಎಂಬುದಕ್ಕೆ ರಾಹುಲ್ ಗಾಂಧಿ ಬಳಿ ಯಾವ ಪುರಾವೆಯೂ ಇಲ್ಲ. ಅವರು ಆಧಾರ ರಹಿತವಾಗಿ ಆರೋಪ ಮಾಡುತ್ತಿದ್ದಾರೆ. ಅವರ ಹತ್ತಿರ ಪುರಾವಳಿಗದ್ದರೆ ಅಫಿಡವಿಟ್ ನೀಡಬಹುದಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.