ADVERTISEMENT

RSS ಟೀಕಿಸದಿದ್ದರೆ ಹರಿಪ್ರಸಾದ್, ಪ್ರಿಯಾಂಕ್‌ಗೆ ತಿಂದ ಅನ್ನ ಅರಗಲ್ಲ: ವಿಜಯೇಂದ್ರ

ಕಾಂಗ್ರೆಸ್‌ನ ಹೊಲಸು ರಾಜಕಾರಣದ ಪ್ರತಿಬಿಂಬ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 15:46 IST
Last Updated 12 ಅಕ್ಟೋಬರ್ 2025, 15:46 IST
2002 ರಲ್ಲಿ ಆರ್‌ಎಸ್‌ಎಸ್‌ ಹಮ್ಮಿಕೊಂಡಿದ್ದ ಸಮರಸತಾ ಸಮಾವೇಶದ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ರೋಷನ್ ಬೇಗ್ ಅವರು ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಪ್ರಕಟಿಸಿದ್ದೂ ಅಲ್ಲದೇ, ಆರ್‌ಎಸ್‌ಎಸ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ್ದರು ಎಂದು ಆರ್‌ಎಸ್‌ಎಸ್‌ ಚಿತ್ರವನ್ನು ಹಂಚಿಕೊಂಡಿದೆ.
2002 ರಲ್ಲಿ ಆರ್‌ಎಸ್‌ಎಸ್‌ ಹಮ್ಮಿಕೊಂಡಿದ್ದ ಸಮರಸತಾ ಸಮಾವೇಶದ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ರೋಷನ್ ಬೇಗ್ ಅವರು ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಪ್ರಕಟಿಸಿದ್ದೂ ಅಲ್ಲದೇ, ಆರ್‌ಎಸ್‌ಎಸ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ್ದರು ಎಂದು ಆರ್‌ಎಸ್‌ಎಸ್‌ ಚಿತ್ರವನ್ನು ಹಂಚಿಕೊಂಡಿದೆ.    

ಬೆಂಗಳೂರು: ‘ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್ಎಸ್‌ ಹೆಸರು ನಿತ್ಯ ಪಠಿಸದಿದ್ದರೆ ತಿಂದ ಅನ್ನ ಅರಗುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

‘ಎಕ್ಸ್‌’ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೀಲಾಕಾಶದಲ್ಲಿ ಭಾರತದ ಭರವಸೆಯ ಬೆಳಕಿನ ನಕ್ಷತ್ರವಾಗಿ ಮಿನುಗುತ್ತಿದೆ. ಹಿಮಾಲಯದೆತ್ತರ ಬೆಳೆದು ನಿಂತಿದೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ. ಸಭ್ಯತೆ, ಘನತೆ, ವ್ಯಕ್ತಿತ್ವ ಇಲ್ಲದ ಮಾತುಗಳು ರಾಜಕೀಯ ಟೀಕೆ ಆಗಲಾರದು. ಅದೇನಿದ್ದರೂ ಹೊಲಸು ರಾಜಕಾರಣದ ಪ್ರತಿಬಿಂಬವಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

‘ಆರ್‌ಎಸ್‌ಎಸ್‌ ಅನ್ನು ನಿತ್ಯವೂ ಜರಿಯುವ ಕೆಲಸಕ್ಕಾಗಿ ಪ್ರಿಯಾಂಕ್ ಮತ್ತು ಹರಿಪ್ರಸಾದ್ ಅವರನ್ನು ನಿಯೋಜಿಸಲ್ಪಟ್ಟಂತೆ ಕಾಣುತ್ತಿದೆ. ಸಂಘ ಶತಮಾನ ಪೂರೈಸಿ ತನ್ನ ಚಟುವಟಿಕೆಗಳನ್ನು ವಿಶ್ವಮಟ್ಟದಲ್ಲಿ ವಿಸ್ತರಿಸುವ ಮೂಲಕ ಯುಗದ ಇತಿಹಾಸ ಬರೆಯುತ್ತಿರುವುದನ್ನು ಸಹಿಸಲಾರದ ಕಾಂಗ್ರೆಸ್ಸಿಗರು ಸಂಘದ ಕುರಿತು ಕುಚ್ಯೋದ ಹಾಗೂ ಕುಚೇಷ್ಟೆ ಮಾತುಗಳನ್ನಾಡುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ರಾಜ್ಯದ ಅಭಿವೃದ್ಧಿಯಲ್ಲಿ ಸಂಪೂರ್ಣ ಎಡವಿ ಬಿದ್ದಿರುವ ಕಾಂಗ್ರೆಸ್‌ ಸರ್ಕಾರ ಮುಖ್ಯಮಂತ್ರಿ ಗಾದಿ ವಿಷಯದಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹದ ವಿಷಯವನ್ನು ದಿಕ್ಕು ತಪ್ಪಿಸಲು ಆರ್‌ಎಸ್ಎಸ್‌ ಹೆಸರು ಬಳಸಿ ವಿಷಯಾಂತರ ಮಾಡಲು ಹೊರಟಿದೆ’ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಪ್ರಿಯಾಂಕ್ ವಜಾಗೆ ರಾಜೀವ್ ಆಗ್ರಹ:

ಸಂವಿಧಾನ ವಿರೋಧಿ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರನ್ನು ತಕ್ಷಣ ಸಂ‍ಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ದೇಶದ ಏಕತೆ– ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ ಎಂದು ಪ್ರಿಯಾಂಕ್ ಪತ್ರದಲ್ಲಿ ಬರೆದಿದ್ದಾರೆ. ಯಾವ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗಿದೆ ಎಂಬುದನ್ನು ಸಾಬೀತು ಮಾಡಬೇಕು. ಇಲ್ಲವಾದರೆ ತಕ್ಷಣವೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದಿದ್ದಾರೆ.

‘ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ಸಂವಿಧಾನದ ಬಗ್ಗೆ ಹೇಳುತ್ತಾ ಸ್ವತಃ ಸಚಿವರೇ ಸಂವಿಧಾನದ ವಿಧಿ 19 ಅನ್ನು ಉಲ್ಲಂಘಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರು ವಿಧಿ 19 ಅನ್ನು ಇನ್ನೊಮ್ಮೆ ಓದಲಿ. ಇದರಡಿ ಕೊಟ್ಟ ಹಕ್ಕುಗಳು, ಅವು ಮೂಲಭೂತ ಹಕ್ಕುಗಳಿದ್ದು, ಅವನ್ನು ಉಲ್ಲಂಘಿಸುವ ಅಂಶವನ್ನು ನೀವು ಹೇಗೆ ಬರೆದಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

ಸಂಘ ವಿರೋಧ– ರಾಷ್ಟ್ರ ವಿರೋಧ: ಸಿ.ಟಿ.ರವಿ

‘ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಏಕೆಂದರೆ ಸಂಘ ರಾಷ್ಟ್ರೀಯ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಸಂಘ ದೇಶ ಭಕ್ತಿಯ ಸಂಸ್ಕಾರವನ್ನು ಕೊಡುತ್ತದೆ. ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತದೆ. ಸಂಘದ ಕುರಿತು ಪ್ರಿಯಾಂಕ್‌ ಖರ್ಗೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಅವರದು ಪೂರ್ವಾಗ್ರಹದ ದ್ವೇಷವಾದರೆ ಅದಕ್ಕೆ ಕಾಲವೇ ತಕ್ಕ ಉತ್ತರ ಕೊಡುತ್ತದೆ’ ಎಂದಿದ್ದಾರೆ.

ವಿನಾಶಕಾಲೇ ವಿಪರೀತ ಬುದ್ಧಿ: ಸುರೇಶ್‌ಕುಮಾರ್

‘ನೆಹರು ಇಂದಿರಾಗಾಂಧಿ ಮತ್ತಿತ್ತರ ಮಹಾನುಭಾವರು ಇದೇ ದುಸ್ಸಾಹಸ ಮಾಡಲು ಹೋಗಿ ಕೈ ಸುಟ್ಟುಕೊಂಡರು. ಇತಿಹಾಸ ಗೊತ್ತಿರದವರು ಮತ್ತೊಮ್ಮೆ ಇದೇ ಕೃತ್ಯ ಮಾಡಲು ಹೊರಟಿದ್ದಾರೆ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಹೇಳಿದ್ದಾರೆ. ‘ಇವರಿಗೂ ಇತಿಹಾಸ ಕಹಿಯಾದ ಪಾಠವನ್ನೇ ಕಲಿಸಲಿದೆ. ಅದನ್ನು ನಮ್ಮ ಕಣ್ಣೆದುರಿಗೇ ನಾವೆಲ್ಲರೂ ನೋಡಲಿದ್ದೇವೆ. ದ್ವೇಷದ ರಾಜಕಾರಣ ಬೆಳವಣಿಗೆಗೆ ಕಂಟಕ. ವಿನಾಶಕಾಲೇ ವಿಪರೀತ ಬುದ್ಧಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.