ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಹೈಕೋರ್ಟ್ ಹೇಳುವ ಮೂಲಕ, ಆರ್‌ಎಸ್‌ಎಸ್ ಪಥ ಸಂಚಲನವನ್ನು ಭಾನುವಾರ (ಅ.19) ನಡೆಸುವುದಕ್ಕೆ ಅವಕಾಶ ನಿರಾಕರಿಸಿದೆ. ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ’ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸುವ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ‘ಅವರು ಮತ್ತೊಮ್ಮೆ ಅರ್ಜಿ ಕೊಡಲಿ, ಆಗ ಸರ್ಕಾರ ಮತ್ತೆ ಯೋಚನೆ ಮಾಡುತ್ತದೆ. ಇದು ಸ್ಪಷ್ಟ ಸಂದೇಶ’ ಎಂದರು.
‘ನೋಂದಣಿ ಪ್ರಮಾಣಪತ್ರ, ಪಥ ಸಂಚಲನದಲ್ಲಿ ಎಷ್ಟು ಜನಭಾಗವಹಿಸುತ್ತಾರೆ ಮತ್ತಿತರ ಮಾಹಿತಿ ನೀಡದ ಕಾರಣ ತಹಶೀಲ್ದಾರ್ ಅನುಮತಿ ನೀಡಿಲ್ಲ. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ನವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಅನುಮತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದೂ ಅವರು ಹೇಳಿದ್ದಾರೆ’ ಎಂದರು.
‘ನನ್ನ ಕ್ಷೇತ್ರದಲ್ಲಿ (ಚಿತ್ತಾಪುರ) ಪಥಸಂಚಲನ ನಡೆಸಲು ಉದ್ದೇಶಪೂರ್ವಕವಾಗಿ ಆರ್‌ಎಸ್‌ಎಸ್‌ನವರು ಯೋಜನೆ ರೂಪಿಸಿದ್ದರು. ನನಗೆ ಬುದ್ದಿ ಕಲಿಸಲು ಮಾಡಿದ್ದರು ಎಂದೆನಿಸುತ್ತಿದೆ. ನನಗೆ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.