
ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಬರುವ ನವೆಂಬರ್ 2ಕ್ಕೆ ನಡೆಸಲು ಉದ್ದೇಶಿಸಿರುವ ಪಥಸಂಚಲನದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಕ್ಕೆ ಕಷ್ಟವಾಗುತ್ತದೆ ಎಂದಾದರೆ ನಾವು ಕೇಂದ್ರದ ನೆರವು ಕೇಳುತ್ತೇವೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೈಕೋರ್ಟ್‌ಗೆ ಅರುಹಿದೆ.
ಚಿತ್ತಾಪುರದಲ್ಲಿ ಅಕ್ಟೋಬರ್ 19ರಂದು ಮಧ್ಯಾಹ್ನ 3 ಗಂಟೆಗೆ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮವನ್ನು ಪ್ರಶ್ನಿಸಿ ಪಥಸಂಚಲನದ ಸಂಚಾಲಕರೂ ಆದ ಚಿಂಚೋಳಿಯ ಹಿರಿಯ ನಾಗರಿಕ ಅಶೋಕ್ ಪಾಟೀಲ್ (70) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಶುಕ್ರವಾರ ವಿಚಾರಣೆ ನಡೆಸಿತು.
ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರ ಎಲ್ಲ ಸಂಘಟನೆಗಳೊಂದಿಗೆ ಇದೇ 28ರಂದು ಶಾಂತಿ ಸಭೆ ನಡೆಸಬೇಕು. ಚಿತ್ತಾಪುರದಲ್ಲಿನ ಪರಿಸ್ಥಿತಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಮತ್ತು ಸಭೆಯಲ್ಲಿ ಕೈಗೊಂಡ ನಿರ್ಣಯದ ವರದಿಯನ್ನು ಇದೇ 30ರಂದು ಕೋರ್ಟ್‌ಗೆ ತಿಳಿಸಬೇಕು’ ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 30ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ವಿವಿಧ ಸಂಘಟನೆಗಳು ಪಥಸಂಚಲನದ ಪರ ಮತ್ತು ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದರ ಪರಿಣಾಮ ಇಡೀ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಒಂದು ವೇಳೆ ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ನಿಭಾವಣೆಯ ಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸಂಘಟಕರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಎರಡು ವಾರಗಳಲ್ಲಿ ಈ ವಿಷಯವನ್ನು ಪರಿಹರಿಸಲಾಗುವುದು.
ಪಥಸಂಚಲನದ ಮಾರ್ಗದಲ್ಲಿ ನ.2ರಂದು ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ, ಯಾವುದೇ ಸಂಘಟನೆಗೂ ಪಥಸಂಚಲನಕ್ಕೆ ಅನುಮತಿ ನೀಡಬಾರದು, ಪರಿಸ್ಥಿತಿ ತಿಳಿಯಾದ ನಂತರ ಕೆಲವು ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅಷ್ಟಕ್ಕೂ ನಾವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿಲ್ಲ. ಎಂಟು ವಿವಿಧ ಸಂಘಟನೆಗಳು ಪಥಸಂಚಲನಕ್ಕೆ ಅನುಮತಿ ಕೋರಿವೆ. ಆವುಗಳಲ್ಲಿ ಯಾವುದನ್ನೂ ಪರಿಗಣಿಸಿಲ್ಲ. ಎಲ್ಲರೂ ತಂತಮ್ಮ ಪಥಸಂಚಲನದ ಬಗ್ಗೆ ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಎರಡು ವಾರಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ.
ನವೆಂಬರ್ 2 ರಂದು ಪಥಸಂಚಲನ ನಡೆಸಲು ಒಪ್ಪಿಕೊಂಡಿದ್ದೇವೆ. ಆದರೆ, ಸರ್ಕಾರ ವಿನಾಕಾರಣ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಪಥಸಂಚಲನ ತಡೆಯಲು ಇತರ ಸಂಘಟನೆಗಳೂ ಅದೇ ದಿನ ಮೆರವಣಿಗೆ ನಡೆಸಲು ಉದ್ದೇಶಿಸಿವೆ.
ಕಳೆದ ವಿಚಾರಣೆಯಲ್ಲೇ ಮಾರ್ಗದ ವಿವರವನ್ನು ನೀಡುವ ಬಗ್ಗೆ ಒಪ್ಪಂದವಾಗಿತ್ತು. ನಾವು ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದೇವೆ. ಈಗ ಹತ್ತು ಸಂಘಟನೆಗಳು ಮುಂದೆ ಬಂದು ಒಂದೇ ದಿನ ಮತ್ತು ಒಂದೇ ಸಮಯದಲ್ಲಿ ಪಥಸಂಚಲನ ನಡೆಸಲು ಬಯಸುತ್ತಿವೆ ಎಂದು ಹೇಳಲಾಗುತ್ತಿದೆ. ಸರ್ಕಾರ ಸೂಕ್ತ ರಕ್ಷಣೆ ನೀಡಲಿ ಮತ್ತು ಇತರ ಸಂಘಟನೆಗಳ ಮೆರವಣಿಗೆ ಅಥವಾ ಪಥಸಂಚಲನಕ್ಕೆ ಬೇರೆ ದಿನ ನಿಗದಿಪಡಿಸಲಿ.
ಪಥಸಂಚಲನ ನಡೆಸುವುದು ನಮ್ಮ ಮೂಲಭೂತ ಹಕ್ಕು. ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಕಾನೂನು ಪಾಲನೆ ಸಾಧ್ಯವಾಗದೇ ಹೋದರೆ ಕೇಂದ್ರದ ಪಡೆ ನಿಯೋಜಿಸುವಂತೆ ನಾವು ಮನವಿ ಮಾಡಲು ಸಿದ್ಧರಿದ್ದೇವೆ.
ಸಮಸ್ಯೆ ಬಗೆಹರಿಯುವ ಮಾರ್ಗದ ಬಗ್ಗೆ ಸರ್ಕಾರದ ವರದಿಯಲ್ಲಿ ಸ್ಪಷ್ಟತೆಯಿಲ್ಲ. ಆಡಳಿತದ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಸಕಾಲ. ಎಲ್ಲರಿಗೂ ಸಮಾಧಾನಕರವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ.ನ್ಯಾ.ಎಂ.ಜಿ.ಎಸ್.ಕಮಲ್
ಸರ್ಕಾರ ಅಂತಿಮ ವರದಿ ಸಲ್ಲಿಸುವ ಬದಲು ಪ್ರಾಥಮಿಕ ವರದಿ ಸಲ್ಲಿಸಿದೆ. ಹಲವು ಸಂಘಟನೆಗಳು ಏಕಕಾಲಕ್ಕೆ ಮೆರವಣಿಗೆ ನಡೆಸಿದರೆ ಕಾನೂನು ಸುವ್ಯವಸ್ಥೆಯ ಆತಂಕ ವ್ಯಕ್ತಪಡಿಸಿರುವ ಜಿಲ್ಲಾಡಳಿತ ತನ್ನ ಅಸಮರ್ಥತೆ ತೋರಿಸಿ ಕೊಂಡಂತಾಗಿದೆಕಾಡ್ಲೂರು ಸತ್ಯನಾರಾಯಣಾಚಾರ್ಯ, ಅರ್ಜಿದಾರರ ಪರ ವಕೀಲ
ನ.2ರಂದು ಹಲವು ಸಂಘಟನೆಗಳು ಮೆರವಣಿಗೆಗೆ ಅವಕಾಶ ಕೋರಿದ್ದಾಗಿ ಸರ್ಕಾರ ಹೇಳಿದೆ. ಅದಕ್ಕೆ ಕೋರ್ಟ್ ಶಾಂತಿಸಭೆ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗ ತೋರಿದೆಅಶೋಕ ಪಾಟೀಲ, ಅರ್ಜಿದಾರ, ಆರ್‌ಎಸ್‌ಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.