ADVERTISEMENT

ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಲಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:11 IST
Last Updated 14 ಅಕ್ಟೋಬರ್ 2025, 16:11 IST
<div class="paragraphs"><p>RSS</p></div>

RSS

   

ಬೆಂಗಳೂರು: ‘ಆರ್‌ಎಸ್‌ಎಸ್‌ ಸಂಘಟನೆಯು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅದರ ಎಲ್ಲ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು’ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆಯು ಒತ್ತಾಯಿಸಿದೆ.

ಸರ್ಕಾರಿ, ಮುಜರಾಯಿ ಇಲಾಖೆಗೆ ಸೇರಿದ ಸ್ಥಳಗಳಲ್ಲಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳಿಗೆ ಅನುಮತಿ ಕೊಡಬಾರದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬರೆದ ಪತ್ರವನ್ನು ಬೆಂಬಲಿಸಿ ಸಂಘಟನೆಯು ಪತ್ರಿಕಾ ಹೇಳಿಕೆ ನೀಡಿದೆ.

ADVERTISEMENT

ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಎಸ್‌.ಜಿ.ಸಿದ್ದರಾಮಯ್ಯ, ವಿಜಯಾ, ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ, ಜಾಣಗೆರೆ ವೆಂಕಟರಾಮಯ್ಯ, ಶ್ರೀಪಾದ ಭಟ್‌, ವಿಮಲಾ ಕೆ.ಎಸ್‌., ಮೀನಾಕ್ಷಿ ಬಾಳಿ, ವಸುಂಧರಾ ಭೂಪತಿ, ಎನ್‌.ಗಾಯತ್ರಿ ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

‘ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಪ್ರಿಯಾಂಕ್‌ ಖರ್ಗೆ ಅವರು ಪತ್ರ ಬರೆದಿರುವುದು ಸಂವಿಧಾನದ ಆಶಯಕ್ಕೆ ಪೂರಕವಾಗಿದೆ. ಆದರೆ ಬಿಜೆಪಿಯ ನಾಯಕರು ಪ್ರಿಯಾಂಕ್‌ ಅವರ ಹೇಳಿಕೆಯನ್ನು ತಿರುಚಿ, ‘ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕು ಎಂದಿದ್ದಾರೆ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರವನ್ನು ನಾವು ಖಂಡಿಸುತ್ತೇವೆ’ ಎಂದಿದ್ದಾರೆ.

‘ಸರ್ಕಾರಕ್ಕೆ ಸೇರಿದ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಆದೇಶ ಹೊರಡಿಸಬೇಕು. ಯಾವ ಸಂಘಟನೆಯೂ ದೊಣ್ಣೆ ಸೇರಿ ಯಾವುದೇ ಆಯುಧ ಹಿಡಿದು ಅಥವಾ ಹಿಂಸೆಗೆ ಪ್ರಚೋದಿಸುವ ಘೋಷಣೆ ಕೂಗುತ್ತಾ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ.